ಚಾಮರಾಜನಗರ:ಎದೆನೋವಿನಿಂದ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ವ್ಯಕ್ತಿ ದಿಡೀರ್ ಜೀವಂತನಾದ ಘಟನೆ ರಾಜ್ಯದಲ್ಲಿ ನಡೆದಿದೆ.
ಹನೂರಿನ ವಿವೇಕಾನಂದ ಶಾಲೆಯಲ್ಲಿ ಚುನಾವಣೆ ತರಬೇತಿಯಲ್ಲಿದ್ದ ನೌಕರ ಜಗದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದರು. ವಿಷಯ ತಿಳಿದು ಮೃತನ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿತ್ತು.
ಇನ್ನೇನು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಅಂದುಕೊಂಡಿದ್ದಾಗ ಮೃತ ವ್ಯಕ್ತಿಗೆ ಜೀವ ಇರುವುದು ಕಂಡು ಬಂದಿದೆ.
ಹನೂರಿನ ಖಜಾನೆ ಇಲಾಖೆಯಲ್ಲಿ ಜಗದೀಶ್ ಎಂಬುವವರು ಕೆಲಸ ನಿರ್ವಹಿಸುತ್ತಿದ್ದರು. ವಿಧಾನಸಭೆ ಚುನಾವಣೆ ನಿಮಿತ್ತ ಅವರನ್ನು ಚುನಾವಣಾ ಕರ್ತವ್ಯಕ್ಕೆ ಹಾಕಲಾಗಿತ್ತು.ಈ ಹಿನ್ನೆಲೆಯಲ್ಲಿ ವಿವೇಕಾನಂದ ಶಾಲೆಯಲ್ಲಿ ಚುನಾವಣಾ ತರಬೇತಿ ನಡೆಯುತ್ತಿತ್ತು.ಈ ವೇಳೆ ಜಗದೀಶ್ ಎದೆನೋವಿನಿಂದ ಕುಸಿದು ಬಿದ್ದಿದ್ದರು.
ಕೂಡಲೇ ಅಲ್ಲಿದ್ದವರು ಅವರನ್ನು ಕಾಮಗೆರೆ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಜಗದೀಶ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದರು.
ಜಗದೀಶ್ ಮೃತಪಟ್ಟಿದ್ದಾರೆಂದು ತಿಳಿದು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು.ಇನ್ನೇನು ಮರಣೋತ್ತರ ಪರೀಕ್ಷೆಗಾಗಿ ಕೊಠಡಿಗೆ ತೆಗೆದುಕೊಂಡು ಹೋಗಬೇಕಿತ್ತು. ಆಗಲೇ ನೋಡಿ ಜಗದೀಶ್ ಕೈ-ಕಾಲು ಆಡಿಸಿದ್ದಾರೆ. ಇದನ್ನೂ ಸಾರ್ವಜನಿಕರು ಗಮನಿಸಿದ್ದು, ಕೂಡಲೇ ವೈದ್ಯರಿಗೆ ತಿಳಿಸಿದ್ದಾರೆ.
ವೈದ್ಯರು ಪರೀಕ್ಷೆ ನಡೆಸಿದಾಗ ಜಗದೀಶ್ ಉಸಿರಾಡುತ್ತಿರುವುದು ಗಮನಿಸಿದ್ದಾರೆ. ಹೃದಯದ ಬಡಿತ ನಿಂತೇ ಹೋಯಿತು ಎಂದುಕೊಂಡವರಿಗೆ ಅಚ್ಚರಿಯಾಗಿ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಗದೀಶ್ ಅವರನ್ನು ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.