ಗಾಝಾದ ಬಳಿಕ ಸಿರಿಯಾ ಮೇಲೂ ದಾಳಿಗೆ ಮುಂದಾದ ಇಸ್ರೇಲ್

ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಿರಿಯ ಸಲಹೆಗಾರ ಸಯ್ಯದ್ ರಾಜಿ ಮೌಸಾವಿ ಅವರನ್ನು ಹತ್ಯೆ ಮಾಡಿದೆ. ಈ ಬೆಳವಣಿಗೆ ಪ್ಯಾಲೆಸ್ತೀನ್‌ -ಇಸ್ರೇಲ್‌ ಯುದ್ಧದ ಮಧ್ಯೆ ಪ್ರಾದೇಶಿಕ ಸಂಘರ್ಷದ ಭೀತಿ ಉಂಟು ಮಾಡಿದರೆ, ಇನ್ನೊಂದು ಕಡೆ ಗಾಝಾದ ಮೇಲೆ ನಡೆಸಿದಂತೆ ಸಿರಿಯಾ ಮತ್ತು ಲೆಬನಾನ್‌ ಮೇಲೆ ರಾಕೆಟ್ ದಾಳಿ ನಡೆಸಲು ಇಸ್ರೇಲ್‌ ಸಿದ್ದತೆ ನಡೆಸುತ್ತಿದೆ ಎಂದು ಅಮೆರಿಕದ ವರದಿಗಾರ ಬರಾಕ್ ರವಿದ್ ತಮ್ಮ ವರದಿಯಲ್ಲಿ ಇಸ್ರೇಲ್‌ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದ್ದಾರೆ.

ಸಯ್ಯದ್ ರಾಜಿ ಮೌಸಾವಿ IRGCನ ಹಿರಿಯ ಕಮಾಂಡರ್‌ಗಳಲ್ಲಿ ಒಬ್ಬರು. ಸಿರಿಯಾ ಮತ್ತು ಇರಾನ್ ನಡುವಿನ ಮಿಲಿಟರಿ ಮೈತ್ರಿಯನ್ನು ಸಂಘಟಿಸುವ ಜವಾಬ್ದಾರಿಯನ್ನು ಇವರು ನಿರ್ವಹಿಸುತ್ತಿದ್ದರು. ಅವರು 80 ರ ದಶಕದಿಂದಲೂ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಕೂಡ ಇಸ್ರೇಲ್‌ ಮೌಸವಿಯ ಹತ್ಯೆಗೆ ಪ್ರಯತ್ನಿಸಿತ್ತು. ಇರಾನ್‌ನಿಂದ ಸಿರಿಯಾಕ್ಕೆ, ಇರಾಕ್‌ನಿಂದ ಸಿರಿಯಾಕ್ಕೆ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾದೊಂದಿಗೆ ಶಸ್ತ್ರಾಸ್ತ್ರಗಳ ಜಾಲದ ಜೊತೆಗೆ ಮೌಸವಿಗೆ ಸಂಬಂಧ ಇದೆ ಎಂದು ಇಸ್ರೇಲ್‌ ಆರೋಪವಾಗಿದೆ ಎಂದು ಅಲ್ ಜಜೀರಾ ವರದಿಗಾರ ಅಲಿ ಹಶೆಮ್ ದಕ್ಷಿಣ ಲೆಬನಾನ್‌ನಿಂದ ವರದಿ ಮಾಡಿದ್ದಾರೆ. 2020ರಲ್ಲಿ ಇರಾಕ್‌ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ IRGCಯ ಕುಡ್ಸ್ ಫೋರ್ಸ್‌ನ ಮುಖ್ಯಸ್ಥ ಕಾಸ್ಸೆಮ್ ಸೊಲೈಮಾನಿ ಆಪ್ತತರಲ್ಲಿ ಮೌಸವಿ ಓರ್ವರಾಗಿದ್ದರು.

ಮೌಸವಿ ಅವರು ಡಮಾಸ್ಕಸ್‌ನ ಉಪನಗರದಲ್ಲಿರುವ ಝೈನಾಬಿಯಾ ಜಿಲ್ಲೆಯಲ್ಲಿ ಕೆಲವು ಗಂಟೆಗಳ ಹಿಂದೆ ಝಿಯೋನಿಸ್ಟ್ಗಳ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಇರಾನ್‌ನ ಅಧಿಕೃತ IRNA ಸುದ್ದಿ ಸಂಸ್ಥೆ ವರದಿ ಮಾಡಿದೆ.

IRGC ಈ ಕುರಿತು ಮಾದ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದು, ಈ ಅಪರಾಧಕ್ಕೆ ಇಸ್ರೇಲ್ ಖಂಡಿತವಾಗಿಯೂ ಬೆಲೆ ತೆರುತ್ತದೆ ಎಂದು ಹೇಳಿದೆ. ಮೌಸವಿಯ ಹತ್ಯೆ ಬಗ್ಗೆ ಘೋಷಿಸಲು ಇರಾನ್‌ ದೂರದರ್ಶನವು ತನ್ನ ನಿಯಮಿತ ಸುದ್ದಿ ಪ್ರಸಾರವನ್ನು ತಡೆಹಿಡಿದಿತ್ತು. ಮೌಸವಿ ಸಿರಿಯಾದಲ್ಲಿದ್ದ ಅತ್ಯಂತ ಅನುಭವಿ IRGC ಸಲಹೆಗಾರರಲ್ಲಿ ಒಬ್ಬರು ಎಂದು ಮಾದ್ಯಮ ವರದಿಯಲ್ಲಿ ವಿವರಿಸಿದೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಮೌಸಾವಿಯ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದು, ಇದು ಜಿಯೋನಿಸ್ಟ್ ಆಡಳಿತದ ಹತಾಶೆ ಮತ್ತು ದೌರ್ಬಲ್ಯದ ಸಂಕೇತವಾಗಿದೆ, ಕೃತ್ಯಕ್ಕೆ ಇಸ್ರೇಲ್‌ ಖಂಡಿತವಾಗಿಯೂ ಬೆಲೆಯನ್ನು ತೆರುತ್ತದೆ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಇಸ್ರೇಲ್‌ನ ಮಿಲಿಟರಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದರೆ US ಸುದ್ದಿ ಸೈಟ್ ಆಕ್ಸಿಯೋಸ್‌ನ ವರದಿಗಾರ ಬರಾಕ್ ರವಿದ್ ಅವರು ಹೆಸರಿಸದ ಇಸ್ರೇಲ್‌ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಇಸ್ರೇಲ್ ಸಿರಿಯಾ ಮತ್ತು ಲೆಬನಾನ್‌ ಮೇಲೆ ರಾಕೆಟ್ ದಾಳಿ ನಡೆಸಿ ಪ್ರತೀಕಾರಕ್ಕೆ ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಇಸ್ರೇಲ್‌ ಸಿರಿಯಾದ ಮೇಲೆ ದಾಳಿ ನಡೆಸಿ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಇಬ್ಬರು IRGC ಸದಸ್ಯರನ್ನು ಹತ್ಯೆ ಮಾಡಿದೆ ಎಂದು ಇರಾನ್ ಹೇಳಿತ್ತು. ಗಾಝಾ ಮೇಲೆ ಕಳೆದ ಮೂರು ತಿಂಗಳಿನಿಂದ ಬಾಂಬ್‌ ದಾಳಿ ನಡೆಸುತ್ತಿರುವ ಇಸ್ರೇಲ್‌ ಹತ್ಯಾಕಾಂಡವನ್ನು ಇರಾನ್ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಇತ್ತೀಚೆಗೆ ಇಸ್ರೇಲ್‌ ಮತ್ತು ಅದರ ಮಿತ್ರರಾಷ್ಟ್ರ ಅಮೆರಿಕ, ಗಾಝಾದಲ್ಲಿ ಯುದ್ಧ ಅಪರಾಧಗಳನ್ನು ಮಾಡುವುದನ್ನು ಮುಂದುವರೆಸಿದರೆ ಮೆಡಿಟರೇನಿಯನ್ ಸಮುದ್ರವನ್ನು ಮುಚ್ಚುವುದಾಗಿ ಇರಾನ್‌ ಬೆದರಿಸಿತ್ತು. ಆ ಬಳಿಕ ಗುಜರಾತ್ ಪೋರಬಂದರ್‌ ಕರವಾಳಿಯ ಹಿಂದೂ ಮಹಾಸಾಗರದಲ್ಲಿ ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್‌ ಡ್ರೋನ್‌ ದಾಳಿ ನಡೆಸಿದೆ ಎಂಬ ಯುಎಸ್ ಆರೋಪಿಸಿತ್ತು. ಆದರೆ ಈ ಆರೋಪವನ್ನು ಇರಾನ್‌ ಆಧಾರ ರಹಿತ ಎಂದು ಹೇಳಿತ್ತು. ಈ ಮಧ್ಯೆಯೇ ಇರಾನ್‌ನ ಕಮಾಂಡರ್‌ ಹತ್ಯೆ ನಡೆದಿದ್ದು, ಇರಾನ್‌ ಪ್ರತಿಕಾರ ಮಾಡುವುದಾಗಿ ಹೇಳಿಕೊಂಡಿದೆ.

ಟಾಪ್ ನ್ಯೂಸ್