ದಲಿತ ಎಂಬ ಕಾರಣಕ್ಕೆ ನನಗೆ ತಾರತಮ್ಯ ಮಾಡಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ ಎಂದು ಜಮ್ಮು- ಕಾಶ್ಮೀರದ ಹಿರಿಯ ಐಎಎಸ್ ಅಧಿಕಾರಿಯೋರ್ವರು ಕೇಂದ್ರಾಡಳಿತ ಪ್ರದೇಶದ ಆಡಳಿತದ ವಿರುದ್ಧ ಆರೋಪವನ್ನು ಮಾಡಿದ್ದಾರೆ.
ಐಎಎಸ್ ಅಧಿಕಾರಿ ಅಶೋಕ್ ಪರ್ಮಾರ್ ಅವರು 1992ರ ಬ್ಯಾಚ್ ನ ಗುಜರಾತ್ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಇವರು ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಲ್ಲಿ 5 ಬಾರಿ ವರ್ಗಾವಣೆ ಮಾಡಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಜಮ್ಮು-ಕಾಶ್ಮೀರದ ಆಡಳಿತ ಕಿರುಕುಳ ಮತ್ತು ಬೆದರಿಕೆಯನ್ನು ಹಾಕುತ್ತಿದೆ ಎಂದು ಐಎಎಸ್ ಅಧಿಕಾರಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮುಂದೆ ದೂರು ದಾಖಲಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪರ್ಮಾರ್ ಅವರನ್ನು ಎರಡು ಉನ್ನತ ಮಟ್ಟದ ಸಭೆಗಳಿಂದ ಹೊರಹಾಕಲಾಯಿತು ಮತ್ತು ಇತರ ಅಧಿಕಾರಿಗಳ ಮುಂದೆ ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.