ಬಾಬರಿ ಮಸೀದಿ ಧ್ವಂಸದ ವೇಳೆ ಗಲಭೆ ಪ್ರಕರಣ; ಹುಬ್ಬಳ್ಳಿಯಲ್ಲಿ 31 ವರ್ಷಗಳ ಬಳಿಕ ಆರೋಪಿಯ ಬಂಧನ

ಮೂರು ದಶಕಗಳ ಹಿಂದಿನ ಬಾಬರಿ ಮಸೀದಿ ಧ್ವಂಸ ಗಲಾಟೆ ವೇಳೆ ಹುಬ್ಬಳ್ಳಿಯಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದು, ಹಳೆ ಪ್ರಕರಣ ಮರುಜೀವ ಪಡೆದುಕೊಂಡಿದೆ.

ಬಾಬರಿ ಮಸೀದಿ ಧ್ವಂಸದ ಒಂದು ದಿನದ ಮೊದಲು ಅಂದರೆ ಡಿ.5, 1992ರಂದು ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯ ಸಂದರ್ಭ ಮಳಿಗೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 8 ಜನರ ವಿರುದ್ಧ ಹುಬ್ಬಳ್ಳಿಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದಾಗ ಆರೋಪಿತ ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಮೂವರು ಆರೋಪಿಗಳು ಮೃತಪಟ್ಟಿದ್ದಾರೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳಾದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಭೇದಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. 2006ರಲ್ಲಿ ಈ ಪ್ರಕರಣವನ್ನು ದೀರ್ಘ ಕಾಲದಿಂದ ಬಾಕಿಯಿರುವ ಪ್ರಕರಣಗಳ ಪಟ್ಟಿಗೆ ಸೇರಿಸಲಾಗಿತ್ತು. ಕಳೆದ 3 ತಿಂಗಳಲ್ಲಿ ನಾವು ಅಂತಹ 37 ಪ್ರಕರಣಗಳನ್ನು ಭೇದಿಸಿದ್ದೇವೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹುಬ್ಬಳ್ಳಿ ಹಿಂಸಾಚಾರ ಪ್ರಕರಣದ ಆರೋಪಿಗಳ ಪೈಕಿ ಮೂವರು ಸಾವಿನಪ್ಪಿದ್ದಾರೆ. ಅವರ ಡೆತ್ ನೋಟ್ ಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಬಂಧಿತ ವ್ಯಕ್ತಿ 30 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಈಗ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಇದರಲ್ಲಿ ವಿಶೇಷತೆ ಏನು ಇಲ್ಲ. ಸಾಮಾನ್ಯ ಪ್ರಕರಣಗಳಂತೆ ಇದನ್ನು ಸಹ ತನಿಖೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ದೀರ್ಘಕಾಲದಿಂದ ಬಾಕಿ ಉಳಿದಿರುವ ಹಳೆಯ ಪ್ರಕರಣ​ಗಳನ್ನು ಕ್ಲಿಯರ್ ಮಾಡುವಂತೆ ಆದೇಶ ಕೊಟ್ಟಿದ್ದೇವೆ. ಇದರ ಭಾಗವಾಗಿ ಬಾಬರಿ ಮಸೀದಿ ಧ್ವಂಸ ಸಂದರ್ಭ ಹುಬ್ಬಳ್ಳಿಯಲ್ಲಿ ಗಲಭೆ ಕೇಸ್‌ಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಹಿಂದೂ ಕಾರ್ಯಕರ್ತರ ಬಣ್ಣ ಹಚ್ಚುವುದು ಸೂಕ್ತವಲ್ಲ. ಕಾನೂನಿನ ಅಡಿಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಉದ್ದೇಶ ಪೂರಕವಾಗಿ ಯಾವುದನ್ನು ಮಾಡುತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್