ಯುವಕನ ಬ್ಯಾಗ್‌ನಲ್ಲಿ ಗಾಂಜಾ ಇಟ್ಟು ಬೆದರಿಸಿ ವಸೂಲಿಗಿಳಿದ ಪೊಲೀಸರು! ಇಬ್ಬರು ಅಮಾನತು

ಬೆಂಗಳೂರು;ಇಬ್ಬರು ಪೊಲೀಸ್‌ ಪೇದೆಗಳು ಯವಕನೊಬ್ಬನ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಹಣದ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿತ್ತು.

ಹೀಗಾಗಿ ಇಬ್ಬರು ಪೊಲೀಸ್ ಕಾನ್ಸ್​ಟೆಬಲ್​ಗಳನ್ನು ಅಮಾನತು ಮಾಡಲಾಗಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾವಾ ಸ್ಪಷ್ಟನೆ ನೀಡಿದ್ದಾರೆ.

ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಬಾವಾ ಹೇಳಿದ್ದಾರೆ.

ಕಳೆದ ವಾರ ವೈಭವ್ ಪಾಟೀಲ್ ಎಂಬುವರು ತಮ್ಮ ಟ್ವೀಟರ್‌ ಖಾತೆಯಲ್ಲಿ ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ನೋವಿನಿಂದ ಬರೆದುಕೊಂಡಿದ್ದರು. ಅನಗತ್ಯವಾಗಿ ನನ್ನನ್ನು ಮಾದಕ ವಸ್ತು ಕಾಯ್ದೆ ಪ್ರಕರಣಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅವರು ದೂರಿದ್ದರು.

ಎಚ್​ಎಸ್​ಆರ್​ ಲೇಔಟ್​ನಲ್ಲಿ ರಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಪೊಲೀಸರು ನನ್ನನ್ನು ತಡೆದರು. ಅವರ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಓರ್ವ ಕಾನ್ಸ್​ಟೆಬಲ್ ನನ್ನ ಬ್ಯಾಗ್ ತಪಾಸಣೆ ಮಾಡಬೇಕೆಂದರು. ನಾನು ಕೊಟ್ಟೆ. ಮತ್ತೊಬ್ಬರು ನನ್ನ ಬಳಿಗೆ ಬಂದು ಎಲ್ಲಿ ಕೆಲಸ ಮಾಡುತ್ತೀ ಎಂದು ಪ್ರಶ್ನೆಗಳನ್ನು ಕೇಳಿದರು. ‘ನೀನು ಗಾಂಜಾ ಸೇದ್ತೀ ಅಲ್ವಾ’ ಎಂದು ಕೇಳಿದಾಗ ನಾನು ನಿರಾಕರಿಸಿದೆ.

ಪೊಲೀಸರು ನನ್ನ ಬ್ಯಾಗ್​ನಲ್ಲಿ ಗಾಂಜಾ ಪೊಟ್ಟಣ ಇರಿಸಿ, ಅದನ್ನು ಬ್ಯಾಗ್​ನಿಂದ ಹೊರಗೆ ತೆಗೆದಂತೆ ನಾಟಕವಾಡಿದರು. ಗಾಂಜಾ ಸೇದುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ನನ್ನನ್ನು ಬಂಧಿಸುವ ನಾಟಕವಾಡಿ ನನ್ನ ಬಳಿಯಿದ್ದ 2,500 ಕಿತ್ತುಕೊಂಡರು. ಮನೆ ತಲುಪಲು ಕನಿಷ್ಠ 100 ಕೊಡಿ ಎಂದರೂ ಕೇಳಲಿಲ್ಲ. ನಾನು ಕೊನೆಗೆ ಊಬರ್ ಬುಕ್ ಮಾಡಿ ಮನೆಗೆ ತೆರಳಿದ್ದೇನೆ ಎಂದು ಟ್ವೀಟ್ ಮಾಡಿ ಪೊಲೀಸರ ಗಮನಕ್ಕೆ ತಂದಿದ್ದರು.

ಟಾಪ್ ನ್ಯೂಸ್