ಹಿಟ್ & ರನ್; ಕೇಂದ್ರ ಸರ್ಕಾರದ ಹೊಸ ಕಾನೂನಿನ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಹಿಟ್‌ & ರನ್‌ ಪ್ರಕರಣಕ್ಕೆ ಸಂಬಂಧಿಸಿದ ನೂತನ ಕಾನೂನು ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಲಾರಿ ಚಾಲಕರು ಮುಷ್ಕರ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಪ್ರತಿಭಟನೆ ತೀವ್ರಗೊಂಡರೆ ಇಂಧನ ಸರಬರಾಜು ಮೇಲೆ ಪರಿಣಾಮ ಬೀರಬಹುದೆಂಬ ಭೀತಿಯಿಂದಾಗಿ ಮಹಾರಾಷ್ಟ್ರ, ಛತ್ತೀಸ್‌ ಗಢ, ಮಧ್ಯಪ್ರದೇಶದಲ್ಲಿ ನೂರಾರು ಜನರು ಪೆಟ್ರೋಲ್‌ ಬಂಕ್‌ ಬಳಿ ಜಮಾಯಿಸಿರುವುದಾಗಿ ವರದಿ ತಿಳಿಸಿದೆ.

ಬ್ರಿಟಿಷ್‌ ಕಾಲದ ಇಂಡಿಯನ್‌ ಪೀನಲ್‌ ಕೋಡ್‌(IPC) ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ನೂತನ ಕಾಯ್ದೆಯ ಪ್ರಕಾರ, ಹಿಟ್‌ ಆಂಡ್‌ ರನ್‌ ಕೇಸ್‌ ನಲ್ಲಿ ಆರೋಪಿ ಅಪಘಾತ ಬಗ್ಗೆ ಮಾಹಿತಿ ನೀಡದೆ ಘಟನಾ ಸ್ಥಳದಿಂದ ಪರಾರಿಯಾದರೆ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ಹಿಟ್‌ ರನ್‌ ಪ್ರಕರಣದ ನೂತನ ಕಾಯ್ದೆಯನ್ನು ವಿರೋಧಿಸಿ ಮಹಾರಾಷ್ಟ್ರದ ವಿವಿಧೆಡೆ ಲಾರಿ ಚಾಲಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಲಾರಿ ಚಾಲಕರ ಪ್ರತಿಭಟನೆಯಿಂದಾಗಿ ಹಲವೆಡೆ ಇಂಧನ ಕೊರತೆ ಉಂಟಾಗಿದೆ ಎಂದು ವರದಿ ವಿವರಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಯಾಂದರ್‌ ಪ್ರದೇಶದಲ್ಲಿ ಮುಂಬೈ-ಅಹಮದಾಬಾದ್‌ ಹೆದ್ದಾರಿಯನ್ನು ತಡೆದು ಮುಷ್ಕರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಹಲವು ಪೊಲೀಸರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

ಸೋಲಾಪುರ್‌, ಕೊಲ್ಹಾಪುರ್‌, ನಾಗ್ಪುರ್‌ ಮತ್ತು ಗೋಂಡಿಯಾ ಜಿಲ್ಲೆಗಳಲ್ಲಿ ರಸ್ತೆಗಳನ್ನು ತಡೆದು ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದರು. ನವಿ ಮುಂಬೈ ಮತ್ತು ಇತರ ಪ್ರದೇಶಗಳಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ವರದಿ ತಿಳಿಸಿದೆ

ಟಾಪ್ ನ್ಯೂಸ್