ಲಕ್ನೋ; ಅಲಹಾಬಾದ್ ಉಚ್ಚ ನ್ಯಾಯಾಲಯವು ಜ್ಞಾನವಾಪಿ ಮಸೀದಿಯಲ್ಲಿರುವ ಶಿವಲಿಂಗ ಎಂದು ಹಿಂದೂಗಳು ಹೇಳುವ ರಚನೆಯ ವಯಸ್ಸನ್ನು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದೆ.
ವಾರಣಾಸಿ ನ್ಯಾಯಾಲಯ ಈ ಮೊದಲು ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಕಂಡುಬಂದ ರಚನೆಯ ಕಾರ್ಬನ್ ಡೇಟಿಂಗ್ ಬೇಡಿಕೆಯನ್ನು ತಿರಸ್ಕರಿಸಿತ್ತು.ಇದೀಗ ಅಲಹಬಾದ್ ಹೈಕೋರ್ಟ್ ಹಿಂದೂಗಳು ಶಿವಲಿಂಗ ಎಂದು ಹೇಳುವ ರಚನೆಯ ವಯಸ್ಸನ್ನು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದೆ.
ರಚನೆಯ ವೈಜ್ಞಾನಿಕ ತನಿಖೆಯನ್ನು ನಡೆಸಲು ಹಿಂದೂ ಆರಾಧಕರು ಸಲ್ಲಿಸಿದ ಅರ್ಜಿಯ ಮೇಲೆ ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಕ್ಟೋಬರ್ 2022 ರಲ್ಲಿ ಕಾರ್ಬನ್ ಡೇಟಿಂಗ್ ಬೇಡಿಕೆಯನ್ನು ತಿರಸ್ಕರಿಸಿದ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಲಕ್ಷ್ಮಿ ದೇವಿ ಮತ್ತು ಇತರ ಮೂವರು ಸಲ್ಲಿಸಿದ ಪರಿಷ್ಕರಣೆ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರಾ ಅವರು ಅಂಗೀಕರಿಸಿದರು.
ಪರಿಷ್ಕರಣೆದಾರರ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್,’ಶಿವಲಿಂಗದ ಕಾರ್ಬನ್ ಡೇಟಿಂಗ್ ಯಾವುದೇ ಹಾನಿಯಾಗದಂತೆ ಮಾಡಬಹುದೇ ಎಂಬ ಬಗ್ಗೆ ಎಎಸ್‌ಐನಿಂದ ತಜ್ಞರ ಅಭಿಪ್ರಾಯವನ್ನು ಕೇಳಬೇಕಾಗಿರುವುದರಿಂದ ಜಿಲ್ಲಾ ನ್ಯಾಯಾಧೀಶರು ಯಾವುದೇ ಆಧಾರವಿಲ್ಲದೆ ಆದೇಶವನ್ನು ಹೊರಡಿಸಿದ್ದಾರೆ. ಹೀಗಾಗಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಜ್ಞಾನವಾಪಿ ಮಸೀದಿಯ ಅಧಿಕಾರಿಗಳು ಈ ರಚನೆಯನ್ನು ಶಿವಲಿಂಗ ಅಥವಾ ಭಗವಾನ್ ಶಿವನ ಅವಶೇಷ ಎಂಬುದಕ್ಕೆ ನಿರಾಕರಿಸಿದ್ದಾರೆ. ಈ ರಚನೆಯು ವುಝು ಖಾನಾದಲ್ಲಿನ ಕಾರಂಜಿಯ ಒಂದು ಭಾಗವಾಗಿದೆ ಎಂದು ಅವರು ಹೇಳಿದರು.
ಮಸೀದಿ ಸಂಕೀರ್ಣದೊಳಗಿನ ದೇಗುಲವಿದೆಯೆಂದೂ ಅದಕ್ಕೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದೂ ಐದು ಹಿಂದೂ ಮಹಿಳೆಯರು ವಿನಂತಿಸಿದ್ದರು. ಪೂಜೆಯನ್ನು ಕೋರುವ ವಿನಂತಿಯನ್ನು ಮಸೀದಿ ಸಮಿತಿಯು ಕೋರ್ಟ್ ನಲ್ಲಿ ಪ್ರಶ್ನಿಸಿತ್ತು.