ತಮಿಳುನಾಡು;ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಕರೂರ್ ಜಿಲ್ಲೆಯ ಮಾಯನೂರಿನ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಮಿಳರಸಿ,ಇನಿಯಾ,ಲಾವಣ್ಯ ಮತ್ತು ಸೋಫಿಯಾ ಮೃತ ಬಾಲಕಿಯರು.ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಿನ್ನೆ ಪುದುಕೊಟ್ಟೈ ಜಿಲ್ಲೆಯ ವಿರಲಿಮಲೈ ಫಿಲಿಪ್ಪೂರ್ ಸರ್ಕಾರಿ ಮಾಧ್ಯಮಿಕ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಿರುಚ್ಚಿ ಜಿಲ್ಲೆಯ ಥಾನಿಯಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲು ಹೋಗಿದ್ದರು.ಕ್ರೀಡಾಕೂಟ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಹಿಂತಿರುಗುವ ಮಾರ್ಗದಲ್ಲಿ ಮಾಯನೂರು ಅಣೆಕಟ್ಟು ನೋಡಲು ಅವರು ತೆರಳಿದ್ದರು.
ಮೊದಲು ಓರ್ವ ವಿದ್ಯಾರ್ಥಿನಿ ನದಿಗೆ ಹಾರಿದ್ದು ಸುಳಿಗೆ ಸಿಲುಕಿದ್ದಾಳೆ.ಈ ವೇಳೆ ನದಿಯಲ್ಲಿ ನೀರಿನ ಹರಿವು ಜೋರಾಗಿತ್ತು.ಆಕೆಯನ್ನು ರಕ್ಷಿಸಲು ಹಾರಿದ ಇತರ ಮೂವರು ಕೂಡ ನೀರು ಪಾಲಾಗಿದ್ದಾರೆ.