ಗೋಧ್ರಾ ಗಲಭೆಯ ನಂತರದಲ್ಲಿ ನಡೆದ ನಾಲ್ಕು ಗಲಭೆ ಪ್ರಕರಣಗಳಲ್ಲಿನ 35 ಮಂದಿ ಆರೋಪಿಗಳು ಖುಲಾಸೆ

ಗುಜರಾತ್;ಪಂಚಮಹಲ್ ಜಿಲ್ಲೆಯ ಹಲೋಲ್‌ನಲ್ಲಿರುವ ಸೆಷನ್ಸ್ ನ್ಯಾಯಾಲಯವು 2002 ರಲ್ಲಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದ ಗೋಧ್ರಾ ನಂತರದ ನಾಲ್ಕು ಪ್ರತ್ಯೇಕ ದಂಗೆ ಪ್ರಕರಣಗಳಲ್ಲಿ ಉಳಿದಿರುವ ಎಲ್ಲಾ 35 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ವಿಚಾರಣೆಯ ಸಮಯದಲ್ಲಿ “ಸಾಕ್ಷಾಧಾರದ ಕೊರತೆ” ಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಜೂನ್ 15 ರಂದು ಲಭ್ಯವಾದ ಜೂನ್ 12 ರ ಆದೇಶದಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹರ್ಷ್ ತ್ರಿವೇದಿ ಅವರು ಗಲಭೆಗಳನ್ನು ಪೂರ್ವುಯೋಜಿತ ಎಂದು ಹೇಳಿದ್ದಕ್ಕಾಗಿ “ಹುಸಿ ಜಾತ್ಯತೀತ ಮಾಧ್ಯಮಗಳು ಮತ್ತು ರಾಜಕಾರಣಿಗಳನ್ನು” ಕಟುವಾಗಿ ಟೀಕಿಸಿದರು.

ರುಹುಲ್ ಪದ್ವಾ, ಹರುನ್ ಅಬ್ದುಲ್ ಸತ್ತಾರ್ ತಾಸಿಯಾ ಮತ್ತು ಯೂಸುಫ್ ಇಬ್ರಾಹಿಂ ಶೇಖ್ ಅವರನ್ನು ಮಾರಣಾಂತಿಕ ಆಯುಧಗಳನ್ನು ಪ್ರಯೋಗಿಸಿ ಹತ್ಯೆಗೈದ ನಾಲ್ಕು ಗಲಭೆ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹಲೋಲ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ್ ತ್ರಿವೇದಿ ಹೇಳಿದ್ದಾರೆ.

ಗೋಧ್ರಾದಲ್ಲಿ ಸಬರಮತಿ ರೈಲು ಅಗ್ನಿದುರಂತದ ಮರುದಿನ, 2002ರ ಫೆಬ್ರವರಿ 28ರಂದು ಕಲೋಲ್ ಬಸ್ ನಿಲ್ದಾಣ, ದೆಲೋಲ್ ಗ್ರಾಮ ಹಾಗೂ ದೆರೊಲ್ ರೈಲು ನಿಲ್ದಾಣದ ಆಸುಪಾಸಿನಲ್ಲಿ ಭುಗಿಲೆದ್ದ ಹಿಂಸಾಚಾರದ ಪ್ರಕರಣಗಳಿಗೆ ಸಂಬಂಧಿಸಿ 35 ಮಂದಿಯ ವಿರುದ್ಧ ಕೊಲೆ ಹಾಗೂ ದೊಂಬಿಯ ಆರೋಪ ಹೊರಿಸಲಾಗಿತ್ತು.

ಈ ಗಲಭೆಗಳಲ್ಲಿ ಆರೋಪಿಗಳು ಮೂವರನ್ನು ಮಾರಕಾಯುಧಗಳಿಂದ ಹತ್ಯೆಗೈದಿದ್ದರು ಹಾಗೂ ಆ ಬಳಿಕ ಸಾಕ್ಷನಾಶದ ಉದ್ದೇಶದಿಂದ ಮೃತದೇಹಗಳನ್ನು ಸುಟ್ಟು ಹಾಕಿದ್ದರು ಎಂದು ಪ್ರಾಸಿಕ್ಯೂಶನ್ ವಾದಿಸಿದೆ.

ಈ ಪ್ರಕರಣಗಳಲ್ಲಿ ಒಟ್ಟು 52 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಸುಮಾರು 20 ವರ್ಷಗಳ ಕಾಲ ನಡೆದ ವಿಚಾರಣೆಯ ಅವಧಿಯಲ್ಲಿ, 12 ಮಂದಿ ಆರೋಪಿಗಳು ನಿಧನರಾಗಿದ್ದರು.

ಟಾಪ್ ನ್ಯೂಸ್