ನವದೆಹಲಿ:2002ರ ಗೋಧ್ರಾ ರೈಲು ದಹನ ಪ್ರಕರಣದ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಆದರೆ ಇತರ ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯನ್ನು ಅವರ ಪಾತ್ರದ ಆಧಾರದಲ್ಲಿ ತಿರಸ್ಕರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಎಂಟು ಅಪರಾಧಿಗಳಿಗೆ 17 ವರ್ಷಗಳಿಂದ ಜೈಲುವಾಸ ಅನುಭವಿಸಿದ ಹಿನ್ನೆಲೆ ಜಾಮೀನು ನೀಡಿದೆ.
2002ರ ಫೆಬ್ರುವರಿ 27ರಂದು ಗುಜರಾತ್‌ನ ಗೋಧ್ರಾದಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ 59 ಮಂದಿ ಮೃತಪಟ್ಟಿದ್ದರು. ಬಳಿಕ ರಾಜ್ಯದಾದ್ಯಂತ ಗಲಭೆ ನಡೆದಿತ್ತು. ಅಪರಾಧಿಗಳು ಈಗಾಗಲೇ ಸುಮಾರು 17 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಗಳ ವಿಚಾರಣೆಯನ್ನು ನಡೆಸಿ ತೀರ್ಪು ನೀಡಿದೆ.
ಗೋಧ್ರಾ ರೈಲು ಕೋಚ್ ಸುಟ್ಟ ಪ್ರಕರಣದ ಅಪರಾಧಿಗಳು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗುಜರಾತ್ ಸರ್ಕಾರ ಪುನರುಚ್ಚರಿಸಿದೆ. ಆರೋಪಿಗಳು ರೈಲಿನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರು.