ನದಿಯಲ್ಲಿ ಚಿನ್ನ ಸಿಗುತ್ತದೆ ಎಂದು ಮುಗಿಬಿದ್ದ ಜನ; ರಾತ್ರಿ ಹಗಲೆನ್ನದೆ ಹುಡುಕಾಟ, ಸ್ಥಳದಲ್ಲಿ ಪೊಲೀಸ್ ನಿಯೋಜನೆ; ಎಲ್ಲಿ ಗೊತ್ತಾ?
ಪಶ್ಚಿಮ ಬಂಗಾಳದ ಬಿರ್‌ಭೂಮ್‌ನ ರಾರಾಯ್‌ನಲ್ಲಿರುವ ಪರ್ಕಂಡಿ ಗ್ರಾಮದ ನದಿಯಲ್ಲಿ ಚಿನ್ನ ಪತ್ತೆಯಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ ಊರಿನವರೆಲ್ಲ ನದಿಯ ಬಳಿ ತೆರಳುತ್ತಿದ್ದಾರೆ.
ನದಿಯ ದಡದಲ್ಲಿ ಬಂಗಾರದ ಹುಡುಕಾಟದಲ್ಲಿ ಕೆಲವರು ತೊಡಗಿದ್ದಾರೆ.ಕೈಯಿಂದ, ಸಲಾಕೆಗಳಿಂದ ನದಿಯ ದಡವನ್ನು ಅಗೆಯುತ್ತಿದ್ದಾರೆ.
ಬನ್ಸ್ಲೋಯ್ ನದಿ ಪರ್ಕಂಡಿ ಗ್ರಾಮದ ಮೂಲಕ ಹರಿಯುತ್ತದೆ.ಮಳೆಗಾಲದಲ್ಲಿ ಈ ನದಿ ತುಂಬಿ ಹರಿಯುತ್ತದೆ. ಬೇಸಿಗೆಯಲ್ಲಿ ನೀರು ಹೇರಳವಾಗಿರುವುದಿಲ್ಲ. ಈಗಂತೂ ನೀರು ಕಡಿಮೆಯಾಗಿದೆ. ಆದರೆ ಈ ನದಿಯ ಮರಳಿನಲ್ಲಿ ಚಿನ್ನ ಸಿಕ್ಕಿದೆ ಎಂಬ ಸುದ್ದಿ ಹರಡಿದೆ.
ಇದರಿಂದ ಜನರು ಬಂದು ಮರಳನ್ನು ಅಗೆಯಲು ಪ್ರಾರಂಭಿಸಿದ್ದಾರೆ.ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬನಿಗೆ ಎರಡು ದಿನಗಳ ಹಿಂದೆ ನದಿ ದಂಡೆಯಲ್ಲಿ ಚಿನ್ನ ಸಿಕ್ಕಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಇದರಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದ್ದು, ಪೊಲೀಸರನ್ನು ನಿಯೋಜಿಸಿದೆ. ಪೊಲೀಸರು ಯಾವುದೇ ಅವಘಡಗಳು ಸಂಭವಿಸದಂತೆ ನದಿ ಬಳಿ ಕಾವಲು ಕಾಯುತ್ತಿದ್ದಾರೆ. ನದಿಯ ಸಮೀಪ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ರಾಮ್‌ಪುರಹತ್ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.