2002ರ ಗೋಧ್ರೋತ್ತರ ಗಲಭೆ; ಸಾಕ್ಷಿಗಳಿಗೆ ನೀಡಿದ ಭದ್ರತೆ ವಾಪಾಸ್

2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ರೈಲು ದಹನ ಮತ್ತು ನಂತರದ ದಂಗೆ ಪ್ರಕರಣಗಳಲ್ಲಿನ ಎಲ್ಲಾ 131 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ವಿಶೇಷ ತನಿಖಾ ತಂಡ (SIT) ಹಿಂತೆಗೆದುಕೊಂಡಿದೆ ಮತ್ತು ಸಾಕ್ಷಿಗಳಿಗೆ ಯಾವುದೇ ಬೆದರಿಕೆಗಳು ಸುದೀರ್ಘ ಅವಧಿಯಲ್ಲಿ ಬಂದಿಲ್ಲ ಎಂದು ಹೇಳಿಕೊಂಡಿದೆ.

ಸಾಕ್ಷಿಗಳ ಜೊತೆಗೆ ಸಂತ್ರಸ್ತರಿಗೆ ಕಾನೂನು ಹೋರಾಟದಲ್ಲಿ ಸಹಾಯ ಮಾಡಿದ ಇಬ್ಬರು ವಕೀಲರಾದ ಎಂ ಎಂ ತಿರ್ಮಿಜಿ ಮತ್ತು ಎಸ್ ಎಂ ವೋಹ್ರಾ ಮತ್ತು ಪ್ರಕರಣದಲ್ಲಿ ತೀರ್ಪನ್ನು ನೀಡಿದ್ದ ನ್ಯಾಯಾದೀಶರ ತಂಡದಲ್ಲಿದ್ದ ಜಡ್ಜ್‌ ಜ್ಯೋತ್ಸ್ನಾ ಯಾಗ್ನಿಕ್‌ ಅವರ ಭದ್ರತೆಯನ್ನು ಕೂಡ ಹಿಂಪಡೆಯಲಾಗಿದೆ.

ಈ ಬಗ್ಗೆ ಎಸ್‌ಐಟಿ ಮಾಹಿತಿಯನ್ನು ನೀಡಿದ್ದು, ಬೆದರಿಕೆ ಬಗ್ಗೆ ಪರಿಶೀಲನೆಯ ನಂತರ ಡಿ.13ರಂದು ಭದ್ರತೆಯನ್ನು ಹಿಂಪಡೆಯಲಾಗಿದೆ. ಬಹುಪಾಲು ಸಾಕ್ಷಿಗಳಿಗೆ 2003ರಿಂದ ರಾಜ್ಯ ಸರ್ಕಾರದಿಂದ ರಕ್ಷಣೆ ನೀಡಲಾಗಿತ್ತು. ನ್ಯಾಯಾಲಯದ ಮುಂದೆ ಸಾಕ್ಷಿ ಹೇಳುವ ವಿಚಾರದಲ್ಲಿ ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಅಥವಾ ಒತ್ತಡವನ್ನು ಹಾಕಲಾಗಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಕಂಡುಕೊಂಡ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದೆ.

ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕಲಾಗಿಲ್ಲ ಎಂದು ಖಚಿತಪಡಿಸಿದ ನಂತರ ನಾವು ಸಾಕ್ಷಿಗಳಿಂದ ಭದ್ರತೆಯನ್ನು ತೆಗೆದುಹಾಕಿದ್ದೇವೆ. ಅವರಲ್ಲಿ ಯಾರೂ ಬೆದರಿಕೆ ಅಥವಾ ಹಲ್ಲೆಯನ್ನು ಎದುರಿಸಿಲ್ಲ ಎಂದು ಎಸ್‌ಐಟಿ ತಂಡದ ಸದಸ್ಯ ಎ ಕೆ ಮಲ್ಹೋತ್ರಾ ಹೇಳಿದ್ದಾರೆ.

ಈ ಹಿಂದೆ ಆ.2021ರಲ್ಲಿ ಎಸ್‌ಐಟಿ 25 ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಉಲ್ಲೇಖಿಸಿ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಇವರಿಗೆ ಸಿಐಎಸ್ಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಭದ್ರತೆ ನೀಡುತ್ತಿದ್ದರು.

ಗೃಹ ಸಚಿವ ಹರ್ಷ ಸಾಂಘವಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿಕಾಸ್ ಸಹಾಯ್ ಮತ್ತು ಎಸ್‌ಐಟಿಯ ಮಾತುಕತೆ ಬಳಿಕ ಸಾಕ್ಷಿಗಳಿಗೆ ರಕ್ಷಣೆಯನ್ನು ತೆಗೆದುಹಾಕಲು ಡಿ.13ರಂದು ಆದೇಶವನ್ನು ನೀಡಲಾಯಿತು. ಇದಲ್ಲದೆ ಹತ್ಯೆಗೀಡಾದ ಕಾಂಗ್ರೆಸ್ ಸಂಸದ ಅಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರ ಭದ್ರತೆಯನ್ನು ಕೂಡ ಸಿಐಎಸ್‌ಎಫ್‌ನಿಂದ ಸ್ಥಳೀಯ ಪೊಲೀಸರಿಗೆ ಇಳಿಸಲಾಗಿದೆ.

ಸಾಕ್ಷಿಗಳ ರಕ್ಷಣೆಗಾಗಿ ಒಟ್ಟು 156 ಪೊಲೀಸರು ಮತ್ತು 98 ಸಿಐಎಸ್ಎಫ್ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ನರೋಡಾ ಪಾಟಿಯಾ ಹತ್ಯಾಕಾಂಡದ ತೀರ್ಪು ನೀಡಿ 12 ವರ್ಷಗಳು ಕಳೆದಿವೆ ಎಂಬ ಕಾರಣಕ್ಕಾಗಿ ನ್ಯಾಯಾಧೀಶೆ ಯಾಗ್ನಿಕ್ ಅವರ ಭದ್ರತೆಯನ್ನು ತೆಗೆದುಹಾಕಲಾಗಿದೆ ಎಂದು ಎಸ್‌ಐಟಿ ಹೇಳಿದೆ. ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ವಿಎಚ್‌ಪಿ ನಾಯಕ ಬಾಬು ಬಜರಂಗಿ ಸೇರಿದಂತೆ 32 ಆರೋಪಿಗಳನ್ನು ಅವರು ತಪ್ಪಿತಸ್ಥರೆಂದು ಘೋಷಿಸಿದ್ದರು. 2018ರಲ್ಲಿ ಕೊಡ್ನಾನಿ ಸೇರಿದಂತೆ 18 ಮಂದಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಗಲಭೆ ಪ್ರಕರಣಗಳ ತೀರ್ಪು ನೀಡಿದ್ದ 9 ನ್ಯಾಯಾಧೀಶರ ಪೈಕಿ ರಕ್ಷಣೆ ಕೋರಿದ ನ್ಯಾಯಾಧೀಶರಲ್ಲಿ ಯಾಗ್ನಿಕ್ ಒಬ್ಬರೇ ಆಗಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ತನಗೆ ಹಲವಾರು ಬೆದರಿಕೆ ಪತ್ರಗಳು ಮತ್ತು ಫೋನ್ ಕರೆಗಳು ಬಂದಿವೆ ಎಂದು ಯಾಗ್ನಿಕ್ ರಕ್ಷಣೆ ಕೋರಿದ್ದರು.

ಡಿ.13ರಂದು ರಕ್ಷಣೆಯನ್ನು ತೆಗೆದುಹಾಕುವ ಆದೇಶವನ್ನು ಹೊರಡಿಸುವವರೆಗೂ ಸಿಐಎಸ್ಎಫ್ ಸಿಬ್ಬಂದಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದರು. ಭದ್ರತಾ ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ. ಎಲ್ಲಾ 9 ಪ್ರಮುಖ ಗಲಭೆ ಪ್ರಕರಣಗಳ (ನರೋಡಾ ಪಾಟಿಯಾ, ನರೋಡಾ ಗಾಮ್, ಗುಲ್ಬರ್ಗ್ ಸೊಸೈಟಿ, ದೀಪ್ದಾ ದರ್ವಾಜಾ, ಸರ್ದಾರ್‌ಪುರ) ವಿಚಾರಣೆಗಳು ಈಗಾಗಲೇ ಮುಗಿದಿವೆ. ಕೆಲವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. ಈ ಬಗ್ಗೆ ಯಾವುದೇ ಸಾಕ್ಷಿಗಳು ಬೆದರಿಕೆ ಅಥವಾ ಹಲ್ಲೆಯ ಬಗ್ಗೆ ದೂರು ನೀಡಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಟಾಪ್ ನ್ಯೂಸ್