ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದೊಯ್ದ ಪ್ರಾಂಶುಪಾಲರನ್ನು ಅಮಾನತುಗೊಳಿಸಿದ ಘಟನೆ ದಕ್ಷಿಣ ಗೋವಾದಲ್ಲಿ ನಡೆದಿದೆ.
ಕೇಶವ್ ಸ್ಮೃತಿ ಹೈಯರ್ ಸೆಕೆಂಡರಿ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಶಾಲಾ ಆಡಳಿತ ಮಂಡಳಿಯು ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ.
ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ದೇಶವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರ ವಿರುದ್ಧ ವಾಸ್ಕೋದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿಕ್ಷಣ ಇಲಾಖೆಯ ನಿರ್ದೇಶಕ ಶೈಲೇಶ್ ಜಿಂಗ್ಡೆ ಈ ಕುರಿತು ಮಾತನಾಡಿದ್ದು, ಆಲ್ಟೊ-ಡಬೋಲಿಮ್‌ನಲ್ಲಿರುವ ಕೇಶವ್ ಸ್ಮೃತಿ ಹೈಯರ್ ಸೆಕೆಂಡರಿ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದುಕೊಂಡು ಹೋಗಲಾಗಿದೆ. ಈ ಕುರಿತು ಇಲಾಖೆಯು ಶಾಲಾ ಆಡಳಿತ ಮಂಡಳಿಯಿಂದ ವಿವರಣೆ ಕೇಳಿದೆ. ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಗಾಂವ್ಕರ್ ಈ ಕುರಿತು ಮಾತನಾಡಿದ್ದು, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಆಹ್ವಾನದ ಮೇರೆಗೆ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ದಾಬೋಲಿಮ್‌ನಲ್ಲಿರುವ ಮಸೀದಿಗೆ ಭೇಟಿ ನೀಡಲಾಗಿದೆ.
ನಮ್ಮ ಶಾಲೆಯ ಮೂವರು ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿ ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳನ್ನು ಮಸೀದಿಗೆ ಕರೆದೊಯ್ಯಲಾಗಿತ್ತು. ಮಸೀದಿಯಲ್ಲಿ ಪ್ರಾರ್ಥನೆಯನ್ನು ಎಲ್ಲಿ ನಡೆಸಲಾಗುತ್ತದೆ ಮತ್ತು ಪ್ರವೇಶ-ನಿರ್ಗಮನ ಪ್ರದೇಶಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಕೆಲವು ವಿದ್ಯಾರ್ಥಿಗಳು ಗೌರವಾರ್ಥವಾಗಿ ತಲೆ ಮುಚ್ಚಿಕೊಂಡಿರಬಹುದು. ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಲು ಅಥವಾ ಆಚರಣೆಗಳನ್ನು ಮಾಡಲು ಬಲವಂತಪಡಿಸಲಾಗಿದೆ ಎಂಬುವುದು ಸುಳ್ಳು ಎಂದು ಹೇಳಿದ್ದಾರೆ.