ಯುದ್ದಪೀಡಿತ ಗಾಝಾದಲ್ಲಿ ಅವಾಂತರ ಸೃಷ್ಟಿಸಿದ ಸಾಂಕ್ರಾಮಿಕ ರೋಗ

ಗಾಝಾದ ಮೇಲೆ ಇಸ್ರೇಲ್ ಕಳೆದ 10 ವಾರಗಳಿಂದ ದಾಳಿಯನ್ನು ನಡೆಸುತ್ತಿದೆ. 19,000ಕ್ಕೂ ಅಧಿಕ ಪ್ಯಾಲೆಸ್ತೀನ್‌ ನಾಗರಿಕರು ಯುದ್ಧದಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬಾಂಬ್‌ಗಳ ದಾಳಿಯಲ್ಲಿ ನಾಗರಿಕರ ಸಾವು ಒಂದೆಡೆಯಾದರೆ, ಇನ್ನೊಂದೆಡೆ ಯುದ್ಧದಿಂದಾಗಿ ಗಾಝಾದಲ್ಲಿ ಭೀಕರ ಸ್ಥಿತಿ ಎದುರಾಗಿದ್ದು, ಸಾಂಕ್ರಾಮಿಕ ರೋಗಗಳು ಉದ್ಭವಿಸುತ್ತಿದೆ.

ಗಾಝಾದಲ್ಲಿ ಆರೋಗ್ಯ ವ್ಯವಸ್ಥೆಯು ಕುಸಿಯುತ್ತಿದೆ ಮತ್ತು ಸಾಂಕ್ರಾಮಿಕ ರೋಗಗಳ ಆತಂಕಕಾರಿಯಾಗಿ ಹೊರಹೊಮ್ಮಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಗಾಝಾದಲ್ಲಿ ಆ ಪರಿಸ್ಥಿತಿ ಎದುರಾಗಿದೆ.

ಗಾಝಾ ನಗರದ ಖಾನ್ ಯೂನಿಸ್‌ ನಗರದ ತಹಾನಿ ಅಬು ತೈಮಾ ಅವರು ಈ ಬಗ್ಗೆ ಮಾತನಾಡುತ್ತಾ, ಇಸ್ರೇಲ್‌ ದಾಳಿಗೆ ಓರ್ವ ಪುತ್ರ ಮತ್ತು ಓರ್ವ ಸಹೋದರನನ್ನು ನಾನು ಕಳೆದುಕೊಂಡಿದ್ದೇನೆ. ಈಗ ಸಾಂಕ್ರಾಮಿಕ ರೋಗ ಇನ್ನುಳಿದ ನನ್ನ ಕುಟುಂಬದ ಸದಸ್ಯರನ್ನು ಬಲಿ ಪಡೆಯುತ್ತದೆ ಎಂಬ ಭೀತಿ ನನಗೆ ಕಾಡುತ್ತಿದೆ ಎಂದು ಹೇಳಿದ್ದಾರೆ. ಅಬು ತೈಮಾ ಅವರ 2 ವರ್ಷದ ಮಗಳು ಅತಿಸಾರ, ವಾಂತಿಯಿಂದ ಬಳಲುತ್ತಿದ್ದಾರೆ ಮತ್ತು ಶೀತ ಮತ್ತು ಆಹಾರದ ಕೊರತೆಯಿಂದ ನಡುಗುತ್ತಿದ್ದಾರೆ. ಮಗು ನನ್ನಲ್ಲಿ ಆಹಾರವನ್ನು ಕೇಳುತ್ತದೆ, ಆದರೆ ನಾನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

42 ವರ್ಷದ ಅಬು ತೈಮಾ ಅವರಿಗೆ ಕ್ಯಾನ್ಸರ್ ಇದೆ. ಈಗ ಅವರು ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುದ್ಧದಿಂದಾಗಿ ಧೂಳು ಮತ್ತು ಇತರ ಕಣಗಳಿಂದಾಗಿ ಮಾಲಿನ್ಯ ಉಂಟಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ವಿದ್ಯುತ್‌ ಇಲ್ಲದ ಕಾರಣ ಬೆಳಕಿಗಾಗಿ ನಾನು ಉರುವಲುಗಳನ್ನು ಸುಡುತ್ತೇನೆ. ಹೊಗೆ ನನ್ನನ್ನು ಕೊಲ್ಲುತ್ತದೆ ಎಂದು ನನಗೆ ಗೊತ್ತಿದೆ ಆದರೆ ನನಗೆ ಬೇರೆ ದಾರಿಯಿಲ್ಲ. ನನ್ನ ಕುಟುಂಬವು ನಾಸರ್ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದೆ. ಆಸ್ಪತ್ರೆಯು ಗಂಭೀರವಾಗಿ ಗಾಯಗೊಂಡವರಿಗೆ ಮಾತ್ರ ಸೀಮಿತ ಚಿಕಿತ್ಸೆಯನ್ನು ನೀಡುತ್ತಿದೆ. ರೋಗಿಗಳು ಮತ್ತು ಆಶ್ರಯ ಪಡೆದ ಜನರು ಶುದ್ಧ ನೀರಿಗಾಗಿ ಪರದಾಡುತ್ತಿದ್ದಾರೆ. ನೈರ್ಮಲ್ಯಗಳಿಲ್ಲ, ಕಿಕ್ಕಿರಿದ ಜನರಿಂದ ಸೋಂಕುಗಳು ವೇಗವಾಗಿ ಹರಡುತ್ತಿವೆ ಎಂದು ಅಬು ತೈಮಾ ಅವರು ಹೇಳಿದ್ದಾರೆ.

ಹಮಾಸ್ ವಿರುದ್ಧ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯ 10 ವಾರಗಳು ಕಳೆದಿದೆ. ಜನರ ವಲಸೆಯಿಂದ ಕಿಕ್ಕಿರಿದ ಆಶ್ರಯ ತಾಣಗಳು, ನಿರಂತರ ಬಾಂಬ್ ದಾಳಿಗಳು, ಹಸಿವಿನಿಂದ ಬಳಲುತ್ತಿರುವ ಗಾಝಾ ಈಗ ರೋಗಕ್ಕೆ ಫಲವತ್ತಾದ ನೆಲವಾಗಿದೆ.

ಚಿಕನ್ಪಾಕ್ಸ್, ದದ್ದುಗಳು, ಮೂತ್ರನಾಳದ ಸೋಂಕುಗಳು, ಮೆನಿಂಜೈಟಿಸ್, ಮಂಪ್ಸ್, ಸ್ಕೇಬೀಸ್, ದಡಾರ ಮತ್ತು ಪುಡ್‌ ಪ್ಯಾಯಿಸನಿಂಗ್‌, ಅತಿಸಾರ, ಕಾಮಾಲೆ ಮತ್ತು ಉಸಿರಾಟದ ಸೋಂಕುಗಳು ಹೆಚ್ಚುತ್ತಿದೆ ಎಂದು ಗಾಝಾದ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಇದಲ್ಲದೆ ಯುದ್ಧ ಪೀಡಿತ ಭೂಮಿಯಲ್ಲಿ ವಿಶ್ವಸಂಸ್ಥೆಯು ಸಂಭಾವ್ಯ 14 ರೋಗಗಳನ್ನು ಪತ್ತೆಹಚ್ಚಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಯುದ್ಧದಿಂದಾಗಿ ಗಾಝಾದ ಪ್ರಾಥಮಿಕ ಆರೈಕೆ ಕೇಂದ್ರಗಳಲ್ಲಿ 3ನೇ ಎರಡರಷ್ಟು ಮುಚ್ಚಲಾಗಿದೆ ಎಂದು WHO ಹೇಳಿದೆ. ಗಾಝಾದ 36 ಆಸ್ಪತ್ರೆಗಳಲ್ಲಿ 11 ಭಾಗಶಃ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸುಮಾರು 1.3 ಮಿಲಿಯನ್ ಜನರು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ 220 ಜನರಿಗೆ ಸರಾಸರಿ ಒಂದು ಶೌಚಾಲಯ ಮತ್ತು ಪ್ರತಿ 4,500ಗೆ ಒಂದು ಮಾತ್ರ ಶವರ್ ಇದೆ ಎನ್ನುವ ಆಘಾತಕಾರಿ ಸತ್ಯವು ಬಹಿರಂಗವಾಗಿದೆ.

ಮಕ್ಕಳಲ್ಲಿ ಅತಿಸಾರದ ಪ್ರಕರಣಗಳು ನ.29ರಿಂದ ಡಿ.10ರವರೆಗೆ 66 ಪ್ರತಿಶತದಷ್ಟು ಹೆಚ್ಚಿವೆ ಮತ್ತು ವಯಸ್ಕರಲ್ಲಿ ಈ ಅಂಕಿ ಅಂಶವು 55 ಪ್ರತಿಶತದಷ್ಟಿದೆ ಎಂದು ದತ್ತಾಂಶಗಳು ಬಹಿರಂಗಪಡಿಸಿದೆ. ನನ್ನ ಮಕ್ಕಳಿಗೆ ಜೀರ್ಣಕ್ರಿಯೆಯ ಸಮಸ್ಯೆಗಳಿವೆ ಮತ್ತು ನಿರಂತರವಾಗಿ ವಾಂತಿಯಾಗುತ್ತದೆ ಮತ್ತು ಅವರಿಗೆ ಚಿಕಿತ್ಸೆ ನೀಡಲು ನನಗೆ ಯಾವುದೇ ಮಾರ್ಗವಿಲ್ಲ. ಆಸ್ಪತ್ರೆಗಳು ತುಂಬಿಕೊಂಡಿವೆ. ಅಲ್ಲಿ ಯಾವುದೇ ಸೇವೆಗಳು ಸಿಗುತ್ತಿಲ್ಲ. ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮನ್ನು ಭೇಟಿ ಮಾಡಿಲ್ಲ ಎಂದು 37 ವರ್ಷದ ಅಲ್-ಟಾಟ್ರಿ ಹೇಳಿದ್ದಾರೆ.

ಟಾಪ್ ನ್ಯೂಸ್