ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೂ ಡಿಸ್ಚಾರ್ಜ್; ಅನಿಲ ದುರಂತದ ಸಂತ್ರಸ್ತರು ಹೇಳುವುದೇನು?

ತಮಿಳುನಾಡಿನ ಎನ್ನೂರಿನ ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಸಿಐಎಲ್)ನಲ್ಲಿ ಡಿಸೆಂಬರ್ 26ರ ರಾತ್ರಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿತ್ತು. ಸುಮಾರು 44 ಜನರು ಉಸಿರಾಟದ ತೊಂದರೆ, ವಾಕರಿಕೆ ಮತ್ತು ಮೂರ್ಛೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯ ಸಂತ್ರಸ್ತರು ಇದೀಗ ಖಾಸಗಿ ಆಸ್ಪತ್ರೆ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳಲು ಕೂಡ ಸಮಯಾವಕಾಶ ನೀಡದೆ ತಮ್ಮನ್ನು ಡಿಸ್ಚಾರ್ಜ್‌ ಮಾಡಿ ಕಳುಹಿಸಿದ್ದಾರೆ. ನಾವು ಎಷ್ಟೇ ವಿನಂತಿ ಮಾಡಿದರೂ ಸ್ಕ್ಯಾನ್,ಎಕ್ಸ್-ರೇ ಮತ್ತು ಇತರ ಯಾವುದೇ ದಾಖೆಯನ್ನು ಹಸ್ತಾಂತರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅನಿಲ ಸೋರಿಕೆ ಸಂಭವಿಸಿದಾಗ 44 ಜನರನ್ನು ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದು ಪೆರಿಯಕುಪ್ಪಂನಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಆಸ್ಪತ್ರೆಯಾಗಿದೆ. ಅನಿಲ ಸೋರಿಕೆಯ ದುಷ್ಪರಿಣಾಮದಿಂದ ಜನರು ಬಳಲುತ್ತಿದ್ದರೂ ಆಸ್ಪತ್ರೆಯ ವೈದ್ಯರು ತರಾತುರಿಯಲ್ಲಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಪೆರಿಯಕುಪ್ಪಂನ ಹಲವಾರು ನಿವಾಸಿಗಳು ಆರೋಪಿಸಿದ್ದಾರೆ.

ಪೆರಿಯಕುಪ್ಪಂ ನಿವಾಸಿ ದೇಸರಾಣಿ ಈ ಕುರಿತು ಮಾತನಾಡಿದ್ದು, ನಾನು ಇನ್ನೂ ದುರಂತದಿಂದ ಚೇತರಿಸಿಕೊಂಡಿಲ್ಲ. ಡಿಸೆಂಬರ್ 26ರಂದು ರಾತ್ರಿ 11.40ರ ಸುಮಾರಿಗೆ ನನಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಉಂಟಾಗಿದೆ. ನನ್ನ ಮಕ್ಕಳು ನನ್ನನ್ನು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ನಾನು ಮನೆಯಿಂದ ಹೊರಬಂದ ತಕ್ಷಣ ಪ್ರಜ್ಞೆ ತಪ್ಪಿದ್ದೆ. ನನ್ನನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಮೂರು ದಿನಗಳ ನಂತರ ವೈದ್ಯರು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ. ಆದರೆ ನಾನು ಉಸಿರಾಡಲು ಹೆಣಗಾಡುತ್ತಿದ್ದೆ. ನನಗೆ ಚಿಕಿತ್ಸೆ ಮುಂದುವರಿಸಲು ಆಸ್ಪತ್ರೆ ನಿರಾಕರಿಸಿದೆ. ಮನೆಗೆ ಬಂದ ನಂತರ ನಾನು ವಾಂತಿ ಮಾಡಲು ಪ್ರಾರಂಭಿಸಿದೆ ಮತ್ತು ಮತ್ತೆ ಮೂರ್ಛೆ ಹೋದೆ. ಆದ್ದರಿಂದ ನನ್ನನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯವರಿಗೆ ಡಿಸ್ಚಾರ್ಜ್‌ ಮಾಡಲು ಏನು ಆತುರ? ಅನಿಲ ಸೋರಿಕೆಯ ಪರಿಣಾಮಗಳು ಕಡಿಮೆ ಎಂದು ತೋರಿಸಲು ಆಸ್ಪತ್ರೆಗೆ ನಮ್ಮನ್ನು ಬಿಡುಗಡೆ ಮಾಡಲು ಒತ್ತಡ ಹಾಕಲಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ.

ಪೆರಿಯಕುಪ್ಪಂ ಗ್ರಾಮದ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದು, ದೇಸರಾಣಿ ಜೊತೆಗೆ 60 ವರ್ಷಕ್ಕಿಂತ ಮೇಲ್ಪಟ್ಟ ಇತರ ಮೂವರನ್ನು ಸರಿಯಾಗಿ ಚಕಿತ್ಸೆ ನೀಡದೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಇದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರು ಸರ್ಕಾರಿ ಸ್ಟಾನ್ಲಿ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳಿಗೆ ಹೋಗಬೇಕಾಯಿತು ಎಂದು ಹೇಳಿದ್ದಾರೆ.

ಕುಮಾರ್ ಅವರು ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಗ್ರಾಮದಿಂದ ಆಸ್ಪತ್ರೆಗೆ ದಾಖಲಾಗಿರುವ 39 ಜನರ ವೈದ್ಯಕೀಯ ವರದಿಯನ್ನು ನೀಡುವಂತೆ ಕೇಳಿದ್ದರು. ಆದರೆ ಆಸ್ಪತ್ರೆ ವರದಿಯನ್ನು ಅಧ್ಯಯನ ಮಾಡಲಿದೆ ಎಂದು ನೀಡಿಲ್ಲ. ರೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಈಗ ಅವರು ಏನು ಅಧ್ಯಯನ ಮಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಅವರು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ನಾವು ಹೆದರುತ್ತಿದ್ದೇವೆ ಎಂದು ಹೇಳಿದ್ದಾರೆ.

ಗ್ಯಾಸ್ ಸೋರಿಕೆ ಸಂತ್ರಸ್ತರಾದ ಸೆಲ್ಚಾ ಅವರು ಮಾತನಾಡಿದ್ದು, ಆಕಾಶ್ ಆಸ್ಪತ್ರೆ ಇನ್ನೂ ನನ್ನ ಸ್ಕ್ಯಾನ್ ಮತ್ತು ಎಕ್ಸ್-ರೇಗಳನ್ನು ಹಸ್ತಾಂತರಿಸಿಲ್ಲ. ಅವರು ನನಗೆ ಪ್ರಿಸ್ಕ್ರಿಪ್ಷನ್ ಮಾತ್ರ ನೀಡಿದ್ದಾರೆ. ನನಗೆ ಉಸಿರಾಡಲು ಕಷ್ಟವಾಗುತ್ತಿದ್ದರಿಂದ ಬೇರೆ ವೈದ್ಯರನ್ನು ಸಂಪರ್ಕಿಸಲು ಬಯಸಿದ್ದೆವು. ನನ್ನ ಪತಿ ಸ್ಕ್ಯಾನ್ ಮತ್ತು ಎಕ್ಸ್-ರೇಯನ್ನು ಸಂಗ್ರಹಿಸಲು ಆಕಾಶ್ ಆಸ್ಪತ್ರೆಗೆ ತೆರಳಿದ್ದರು. ಅವರು ಮೂರು ದಿನಗಳಲ್ಲಿ ನೀಡುವುದಾಗಿ ನನ್ನ ಪತಿಗೆ ಹೇಳಿದ್ದರು, ಆದರೆ ಹತ್ತು ದಿನಗಳು ಕಳೆದರು ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್ 26 ರಂದು ರಾತ್ರಿ 11.45ರ ಸುಮಾರಿಗೆ ಉತ್ತರ ಚೆನ್ನೈನ ಕಡಲತೀರದಲ್ಲಿರುವ ರಸಗೊಬ್ಬರ ತಯಾರಿಕಾ ಘಟಕಕ್ಕೆ ಜೋಡಿಸಲಾದ ಸಬ್‌ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಬಳಿಕ ಕಾರ್ಮಿಕರು ಬಾಯಿ ಮಾತಿನ ಮೂಲಕ ನಿವಾಸಿಗಳನ್ನು ಎಚ್ಚರಿಸಿದರು,ನಂತರ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿದ್ದಾರೆ.ಹಲವರು ಉಸಿರಾಟದ ತೊಂದರೆ, ವಾಕರಿಕೆಯಿಂದ ಅಸ್ವಸ್ಥಗೊಂಡಿದ್ದರು.

ಟಾಪ್ ನ್ಯೂಸ್