ನವದೆಹಲಿ; ಬೀದಿಬದಿ ವ್ಯಾಪಾರಿಗಳು, ಹೋಟೆಲ್‌ಗಳು ಅಥವಾ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡಿಕೊಡಲು ದಿನಪತ್ರಿಕೆಗಳನ್ನು ಬಳಸಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೊಸ ಸೂಚನೆ ನೀಡಿದೆ.
ದಿನಪತ್ರಿಕೆಗಳಲ್ಲಿ ಆಹಾರ ಪಧಾರ್ಥಗಳನ್ನು ಪಾರ್ಸೆಲ್ ಮಾಡಿಕೊಡುವುದರಿಂದ ಗ್ರಾಹಕರಿಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯಗಳನ್ನು ಉಲ್ಲೇಖಿಸಿದೆ.
ಆಹಾರ ಪದಾರ್ಥಗಳ ಪ್ಯಾಕಿಂಗ್, ಸೇವೆ ಮತ್ತು ಶೇಖರಣೆಗಾಗಿ ಪತ್ರಿಕೆಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಎಫ್‌ಎಸ್‌ಎಸ್‌ಎಐ ಕೇಳಿಕೊಂಡಿದೆ.
ದೇಶಾದ್ಯಂತ ಗ್ರಾಹಕರು ಮತ್ತು ಆಹಾರ ಮಾರಾಟಗಾರರು ಆಹಾರ ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲು, ಬಡಿಸಲು ಮತ್ತು ಸಂಗ್ರಹಿಸಲು ಪತ್ರಿಕೆಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಅವರು ಆಹಾರವನ್ನು ಕಟ್ಟುವಾಗ ಸುತ್ತುವ ಅಥವಾ ಪ್ಯಾಕೇಜಿಂಗ್ ಮಾಡಲು ಪತ್ರಿಕೆಗಳನ್ನು ಬಳಸುವುದರಿಂದ ಅದನ್ನು ಕೊಂಡು ತಿನ್ನುವ ಜನರಿಗೆ ಗಮನಾರ್ಹವಾದ ಆರೋಗ್ಯ ಅಪಾಯಗಳು ಬರುತ್ತವೆ ಎಂದು ಎಚ್ಚರಿಸಲಾಗಿದೆ.
ಪತ್ರಿಕೆಗಳಲ್ಲಿ ಬಳಸುವ ಕಪ್ಪು ಶಾಯಿಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ವಿವಿಧ ಜೈವಿಕ ಸಕ್ರಿಯ ವಸ್ತುಗಳನ್ನು ಒಳಗೊಂಡಿದೆ. ಇದು ಆಹಾರವನ್ನು ಕಲುಷಿತಗೊಳ್ಳಲಿದ್ದು, ಅದನ್ನು ಸೇವಿಸಿದಾಗ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಸಿದೆ.
ಪತ್ರಿಕೆಗಳು ಪ್ರಿಂಟಿಂಗ್ ಇಂಕ್‌ಗಳು ಸೀಸ ಮತ್ತು ಭಾರ ಲೋಹಗಳನ್ನು ಒಳಗೊಂಡಂತೆ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಅದು ಆಹಾರಕ್ಕೆ ಸೋರಿಕೆಯಾಗಬಹುದು, ಬಳಿಕ ಇದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು.