ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನಿರಾಕರಣೆ

ಕಾಶ್ಮೀರದ ಐತಿಹಾಸಿಕ ಅಂಜುಮನ್ ಔಕಾಫ್ ಜುಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅಧಿಕಾರಿಗಳು ನಿರಂತರವಾಗಿ ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.

14ನೇ ಶತಮಾನದ ಅಂಜುಮನ್ ಔಕಾಫ್ ಜಮಾ ಮಸೀದಿಯ ಆಡಳಿತ ಮಂಡಳಿ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಶ್ರೀನಗರದ ಅಧಿಕಾರಿಗಳು ಹುರಿಯತ್ ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಕಾಶ್ಮೀರದ ಮುಖ್ಯ ಧರ್ಮಗುರುಗಳೂ ಆಗಿರುವ ಮಿರ್ವೈಜ್ ಅವರು ಶುಕ್ರವಾರದ ಪ್ರಾರ್ಥನೆ ಮತ್ತು ಇತರ ಪ್ರಮುಖ ಧಾರ್ಮಿಕ ದಿನಗಳಲ್ಲಿ ಮಸೀದಿಯಲ್ಲಿ ಮುಖ್ಯ ಧರ್ಮೋಪದೇಶವನ್ನು ನೀಡುತ್ತಿದ್ದರು. ಮಸೀದಿಯಲ್ಲಿ ಪ್ರಾರ್ಥನೆಗೆ ನಿರ್ಬಂಧಿಸಿರುವುದಕ್ಕೆ ಮತ್ತು ಧರ್ಮಗುರುವಿಗೆ ಗೃಹ ಬಂಧನ ವಿಧಿಸಿರುವುದಕ್ಕೆ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡಿಲ್ಲ ಎಂದು ಮಸೀದಿಯ ವ್ಯವಸ್ಥಾಪಕ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಿರ್ವೈಜ್, ಅಧಿಕಾರಿಗಳು ಜಾಮಿಯಾ ಮಸೀದಿಯನ್ನು ಗುರಿಯಾಗಿಸಿದ್ದಾರೆ. ಕಣಿವೆ ರಾಜ್ಯದ ಮುಸ್ಲಿಮರಿಗೆ ದುಃಖವನ್ನುಂಟುಮಾಡಲು ಮತ್ತು ಅವರಿಗೆ ಆಧುನಿಕ ಕಾಶ್ಮೀರದಲ್ಲಿ ಅವರ ಸ್ಥಾನಮಾನವನ್ನು ತೋರಿಸಲು ಈ ರೀತಿಯಾಗಿ ಮಾಡಲಾಗುತ್ತಿದೆ. ಮುಸ್ಲಿಮರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವುದನ್ನು ಸರಕಾರ ನಿಲ್ಲಿಸಬೇಕು ಮತ್ತು ಅವರು ತಮ್ಮ ಮಸೀದಿಗಳಲ್ಲಿ ಅಡೆತಡೆಗಳಿಲ್ಲದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು. ಜನರ ಮೌನ ಮತ್ತು ಅವರ ಧಾರ್ಮಿಕ ಹಕ್ಕುಗಳ ಮೇಲೆ ಲಜ್ಜೆಗೆಟ್ಟು ದಾಳಿಗಳನ್ನು ಮಾಡುವಾಗ ಪ್ರತಿಕ್ರಿಯಿಸದಿರುವಿಕೆ ನಮ್ಮ ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು ಎಂದು ಹೇಳಿದ್ದಾರೆ.

ನಾಲ್ಕು ವರ್ಷಗಳ ಗೃಹ ಬಂಧನದ ಬಳಿಕ ಮಿರ್ವೈಜ್ ಅವರನ್ನು ಇತ್ತೀಚೆಗೆ ಗೃಹಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ಅವರಿಗೆ ಶ್ರೀನಗರದ ನೌಹಟ್ಟಾ ಪ್ರದೇಶದ ಮಸೀದಿಯಲ್ಲಿ ಶುಕ್ರವಾರ ಧರ್ಮೋಪದೇಶವನ್ನು ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ ಮೊದಲ ಬಾರಿಗೆ ಅವರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಮಸೀದಿಯಲ್ಲಿ ಅವರು ಭಾವುಕರಾಗಿದ್ದರು. ಸಾವಿರಾರು ಜನರು ಮಸೀದಿಯಲ್ಲಿ ಅವರು ಭಾವುಕರಾಗಿ ಮಾತನಾಡುವುದರಿಂದ ಕಾನೂನು-ಸುವ್ಯವಸ್ಥೆ ಅಡಚಣೆಯಾಗಬಹುದು ಎನ್ನುವುದು ಅಧಿಕಾರಿಗಳು ಕೊಡುತ್ತಿರುವ ಕಾರಣವಾಗಿದೆ.

ಮಿರ್ವೈಜ್ ಅವರು ಸೆ.22 ರಂದು ಬಿಡುಗಡೆಯಾದಾಗಿನಿಂದ ಎರಡು ಶುಕ್ರವಾರ ಮಸೀದಿಯಲ್ಲಿ ತಮ್ಮ ಧರ್ಮೋಪದೇಶವನ್ನು ನೀಡಿದ್ದರು. ಅಧಿಕಾರಿಗಳು ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆಗೆ ಅನುಮತಿ ನಿರಾಕರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಮಸೀದಿಯ ಆಡಳಿತ ಮಂಡಳಿಯು ಅಧಿಕಾರಿಗಳು ಭದ್ರತಾ ಕಾಳಜಿಯ ಕಾರಣ ನೀಡಿ ಕಾಶ್ಮೀರದ ಜನರ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆರ್ಟಿಕಲ್ 370ನ್ನು ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರ ಸರ್ಕಾರದ ಆಗಸ್ಟ್ 5, 2019ರ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ವೇಳೆಯೇ ಈ ಐತಿಹಾಸಿಕ ಮಸೀದಿಯಲ್ಲಿ ಪ್ರಾರ್ಥನೆಗೆ ನಿರಾಕರಿಸಲಾಗಿದೆ.

ಕಳೆದ ತಿಂಗಳು ಗಾಝಾವನ್ನು ಬೆಂಬಲಿಸಿ ಪ್ರತಿಭಟನೆಗಳನ್ನು ನಡೆಸಬಹುದು ಎಂಬ ಆತಂಕದಿಂದ ಅಧಿಕಾರಿಗಳು ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಇದಲ್ಲದೆ ಸೂಫಿ ಸಂತರ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಸಮಸ್ಯೆಯನ್ನು ಪ್ರಸ್ತಾಪಿಸುವುದನ್ನು ತಪ್ಪಿಸಬೇಕು ಮತ್ತು ಪ್ಯಾಲೆಸ್ತೀನ್‌ ಸಮಸ್ಯೆ ಬಗ್ಗೆ ಮಸೀದಿಯಲ್ಲಿ ಧ್ವನಿ ಎತ್ತಬಾರದು ಎಂದು ಜಮ್ಮು-ಕಾಶ್ಮೀರದ ವಕ್ಫ್ ಮಂಡಳಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.

ಟಾಪ್ ನ್ಯೂಸ್