ಸಚಿವರ ಬಗ್ಗೆ ವರದಿ ಬೆನ್ನಲ್ಲೆ ಪತ್ರಕರ್ತನ ಮೇಲೆ 11 ಎಫ್ ಐಆರ್ ದಾಖಲು
ಮಧ್ಯಪ್ರದೇಶ; ಬಿಜೆಪಿ ಸರಕಾರದ ಸಚಿವರೊಬ್ಬರ ಬಗ್ಗೆ ವರದಿ ಮಾಡಿದ ಪತ್ರಕರ್ತರೊಬ್ಬರ ಮೇಲೆ 11 ಎಫ್‌ಐಆರ್‌ಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.
ಸೆ.7 ರಂದು ‘ದೈನಿಕ್ ಖುಲಾಸಾ’ದ ವರದಿಗಾರ ಜಲಮ್ ಸಿಂಗ್ ಕಿರಾರ್ ಅವರು ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ಮಹಿಳೆಯೊಂದಿಗೆ ಕಾಣಿಸಿಕೊಂಡಿರುವ ವಿವಾದಾತ್ಮಕ ವೀಡಿಯೊವ ಬಗ್ಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ಗುಣಾದಲ್ಲಿ ವೈರಲ್ ಆಗಿರುವ ವೀಡಿಯೊದ ಕುರಿತು ಬರೆಯುತ್ತಾ, ರಾಜಕಾರಣಿಯೊಬ್ಬರು ವೀಡಿಯೋದಿಂದಾಗಿ ಚುನಾವಣಾ ಟಿಕೆಟ್ ಕಳೆದುಕೊಳ್ಳಬಹುದು ಎಂದು ಅವರು ಮಹೇಂದ್ರ ಸಿಂಗ್ ಹೆಸರನ್ನು ಉಲ್ಲೇಖಿಸದೆ ಬರೆದಿದ್ದರು.
ಇದರ ಬೆನ್ನಲ್ಲೇ ವರದಿಗಾರ ಜಲಮ್ ಸಿಂಗ್ ಕಿರಾರ್ ವಿರುದ್ಧ 11 ಎಫ್‌ಐಆರ್‌ಗಳು ದಾಖಲಾಗಿದ್ದವು. ಬ್ಲಾಕ್‌ಮೇಲ್ ಆರೋಪದ ಮೇಲೆ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸೆಪ್ಟೆಂಬರ್‌ನಲ್ಲಿ ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಕೋಟ್ವಾಲಿಯ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆ ದೂರು ದಾಖಲಿಸಿದ್ದಾರೆ. ವದಂತಿಗಳನ್ನು ಹರಡುವ ಮೂಲಕ ಸಿಂಗ್ ಸಿಸೋಡಿಯಾ ಅವರ ಇಮೇಜ್‌ಗೆ ಧಕ್ಕೆ ತಂದಿದ್ದಾರೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವರದಿಗಾರ ಜಲಮ್ ಸಿಂಗ್ ಕಿರಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 384 ಮತ್ತು 385 ಮತ್ತು 469ರಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸೆ.13 ರಂದು ಕೋಟಾದಿಂದ ಪತ್ರಕರ್ತ ಸಿಂಗ್ ಅವರನ್ನು ಬಂಧಿಸಲಾಯಿತು. ಸುಮಾರು ಡಜನ್ ಎಫ್‌ಐಆರ್‌ಗಳನ್ನು ಗುಣ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ದಾಖಲಿಸಲಾಗಿದೆ ಎಂದು ಅವರ ಕುಟುಂಬದ ಸದಸ್ಯರು ನ್ಯೂಸ್‌ಲಾಂಡ್ರಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
11 ಎಫ್‌ಐಆರ್‌ಗಳಲ್ಲಿ ಎಂಟು ಎಫ್‌ಐಆರ್‌ಗಳು ಆಡಳಿತಾರೂಢ ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳಿಂದ ದಾಖಲಾಗಿವೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ.
ಸಿಂಗ್ ಅವರು ತನ್ನ ವರದಿಯಲ್ಲಿ ಯಾವುದೇ ರಾಜಕಾರಣಿಯ ಹೆಸರು ಉಲ್ಲೇಖಿಸಿಲ್ಲ. ಆದರೂ ಸಚಿವರೊಬ್ಬರು ಸಿಂಗ್ ವಿರುದ್ಧ ಇತರರು ಹೆಚ್ಚು ದೂರುಗಳು ನೀಡುವಂತೆ ಮಾಡಿದ್ದಾರೆ ಹಾಗೂ ಅದಕ್ಕಾಗಿ ಆಡಳಿತದ ಮೇಲೆ ಒತ್ತಡ ಹೇರಿದ್ದಾರೆ ಎಂದು ದೈನಿಕ ಖುಲಾಸಾದ ಸಂಪಾದಕ ಸುರೇಶ್ ಆಚಾರ್ಯ ಹೇಳಿದ್ದಾರೆ.