ರಾಷ್ಟ್ರಗೀತೆಗೆ ಅವಮಾನ; 12 ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲು

ಪ.ಬಂಗಾಳ ರಾಜ್ಯ ವಿಧಾನಸಭೆ ಆವರಣದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಮತ್ತು ಪಕ್ಷದ ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದಂತೆ 12 ಬಿಜೆಪಿ ಶಾಸಕರ ವಿರುದ್ಧ ಕೋಲ್ಕತ್ತಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೇಂದ್ರ ಸರಕಾರದ ವಿವಿಧ ಯೋಜನೆಗಳಡಿ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಬಾಕಿ ಹಣ ಪಾವತಿಯಾಗದಿರುವುದನ್ನು ವಿರೋಧಿಸಿ ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್‌ನ ಶಾಸಕರು ಕಪ್ಪು ಬಟ್ಟೆ ಧರಿಸಿ ವಿಧಾನಸಭೆ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನೆ ಮುಕ್ತಾಯದ ವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಪಕ್ಷದ ಮೆಗಾ ರ್ಯಾಲಿಗೆ ತೆರಳಲು ವಿಪಕ್ಷ ನಾಯಕ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ ಶಾಸಕರ ಗುಂಪು ವಿಧಾನಸಭೆ ಆವರಣಕ್ಕೆ ಆಗಮಿಸಿದೆ. ಈ ವೇಳೆ ವಿಪಕ್ಷ ನಾಯಕ ಸೇರಿದಂತೆ ಶಾಸಕರು ಪ್ರತಿಭಟನಾನಿರತರಾಗಿದ್ದವರ ನೋಡಿ ‘ಕಳ್ಳರು, ಕಳ್ಳರು’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಆಡಳಿತ ಪಕ್ಷದ ಶಾಸಕರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರಿಗೆ ದೂರು ನೀಡಿದ್ದರು. ಈ ವಿಚಾರದಲ್ಲಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿತ್ತು.

ಈ ಕುರಿತು ಕೋಲ್ಕತ್ತಾ ಪೊಲೀಸ್‌ ಉಪ ಆಯುಕ್ತರಿಗೆ ಮೂವರು ತೃಣಮೂಲ ಕಾಂಗ್ರೆಸ್ ಶಾಸಕರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ 12 ಬಿಜೆಪಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್‌ ದಾಖಲಾದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅಗ್ನಿಮಿತ್ರ ಪೌಲ್, ನಮ್ಮ 12 ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ತುಂಬಾ ವಿಚಿತ್ರವಾಗಿದೆ. ಏಕೆಂದರೆ ನಾವು ಮಮತಾ ಸರ್ಕಾರದ ದುಷ್ಕೃತ್ಯಗಳಿಂದ ಬಳಲುತ್ತಿರುವ ಬಂಗಾಳದ ಜನರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಅಸೆಂಬ್ಲಿ ಒಳಗೆ ನಿರ್ಣಾಯಕ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

ನಾವು ಅವರ ಅನುಮತಿಯನ್ನು ತೆಗೆದುಕೊಳ್ಳಬೇಕೇ? ನಮಗೆ ಒಳಗೆ ಮಾತನಾಡಲು ಅವಕಾಶವಿಲ್ಲ, ನಾವು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಯಸಿದಾಗ, ನೀವು ನಮಗೆ ಮಾತನಾಡಲು ಬಿಡುವುದಿಲ್ಲ, ಹಿಂಸಾಚಾರ, ಭ್ರಷ್ಟಾಚಾರ, ಅತ್ಯಾಚಾರದ ವಿರುದ್ಧ ನೀವು ಮಾತನಾಡುವುದಿಲ್ಲ. ನಾವು ಮಾತನಾಡುವಾಗ ಇದರ ವಿರುದ್ಧ ಘೋಷಣೆ ಕೂಗಿದಾಗ ನೀವು ಪೊಲೀಸರಿಗೆ ಕರೆ ಮಾಡಿ ನಮ್ಮ ಮೇಲೆ ಎಫ್‌ಐಆರ್‌ಗಳನ್ನು ಹಾಕಿಸಿದ್ದೀರಿ ಎಂದು ವಾಗ್ಧಾಳಿ ನಡೆಸಿದ್ದಾರೆ.

ಟಾಪ್ ನ್ಯೂಸ್