11 ರ ಹರೆಯದ ಬಾಲಕಿಯೋರ್ವಳು ಜಗತ್ತಿನ ಶ್ರೇಷ್ಟ ವಿಜ್ಞಾನಿ, ಸಾಪೇಕ್ಷತಾ ಸಿದ್ಧಾಂತದ ಜನಕ ಐನ್‌ಸ್ಟೈನ್ ಅವರನ್ನು ಮೀರಿಸುವ ಬುದ್ಧಿಮತ್ತೆಯನ್ನು ಹೊಂದಿದ್ದು, 11ರ ಹರೆಯದಲ್ಲೇ ಇಂಜಿನಿಯರಿಂಗ್ ಮಾಸ್ಟರ್ ಡಿಗ್ರಿಯನ್ನು ಪೂರ್ಣಗೊಳಿಸಿ ಎಲ್ಲರ ಅಚ್ಚರಿಗೆ ಕಾರಣಳಾಗಿದ್ದಾಳೆ.
ಮೆಕ್ಸಿಕೋದ 11 ವರ್ಷದ ಬಾಲಕಿ ಅಧಾರ ಪೆರೆಜ್ ಸ್ಯಾಂಚೆಜ್ ಎಂಬಾಕೆ ವಿಶಿಷ್ಟವೆ ಬುದ್ಧಿಶಕ್ತಿಯನ್ನು ಹೊಂದಿದ್ದು, ಆಕೆಯನ್ನು ಸಾಮಾನ್ಯರಿಗಿಂತ ವಿಭಿನ್ನ ಸ್ಥಾನದಲ್ಲಿ ನಿಲ್ಲಿಸಿದೆ.
ಬಾಲಕಿಯ ಬುದ್ಧಿಮತ್ತೆ 162 ಅಂಕಗಳಿಷ್ಟಿದ್ದು, ಇದು ಪ್ರಸಿದ್ಧ ಭೌತಶಾಸ್ತ್ರಜ್ಞ ಅಲ್ಬರ್ಟ್ ಐನ್‌ಸ್ಟೈನ್ ಅವರ ಬುದ್ಧಿಮತ್ತೆಗಿಂತಲೂ ಅಧಿಕ ಎನ್ನಲಾಗುತ್ತಿದೆ. ಸ್ಯಾಂಚೆಜ್ ಈಗ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆಯುತ್ತಿದ್ದಾಳೆ.
ಪೆರಜ್ ಈಗಾಗಲೇ ಸಿಸ್ಟಂ ಇಂಜಿನಿಯರಿಂಗ್ ವಿಷಯದಲ್ಲಿ ಸಿಎನ್‌ಸಿಐ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದು, ಹಾಗೆಯೇ ಮೆಕ್ಸಿಕೋದ ಟೆಕ್ನಾಲಾಜಿಕಲ್ ವಿಶ್ವವಿದ್ಯಾನಿಲಯದಿಂದ ಮ್ಯಾಥಮೆಟಿಕ್ಸ್‌ನಲ್ಲಿ ವಿಶೇಷ ಡಿಗ್ರಿಯನ್ನು ಪಡೆದಿದ್ದಾರೆ.
ಅಚ್ಚರಿ ಎಂದರೆ ಬಾಲಕಿ ಪೆರಜ್ ಆಟಿಸಂ ಅಥವಾ ಸ್ವಲೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.ತನ್ನ ಸ್ವಲೀನತೆಯ ಸಮಸ್ಯೆಯ ನಡುವೆಯೂ ಸ್ಯಾಂಚೆಜ್ ತನ್ನ ಐದನೇ ವಯಸ್ಸಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರೈಸಿದ್ದು, ಕೇವಲ ಒಂದು ವರ್ಷದಲ್ಲಿ ಮಧ್ಯಮ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕೂಡ ಪೂರೈಸಿದ್ದಾರೆ.
ಒಂದು ಮಗುವಿಗೆ ಆಟಿಸಂ ಇದೆ ಅಂದಾಗ ಮಗುವಿನ ಪೋಷಕರಿಗೆ ಅನಿರೀಕ್ಷಿತ ಆಘಾತ ಉಂಟಾಗುತ್ತದೆ. ಮಗುವಿನ ವರ್ತನೆಯಿಂದ ಬೇಸತ್ತು ಮಗುವಿನ ಕುಟುಂಬ, ಸಮಾಜ, ಶಾಲೆ ಎಲ್ಲವೂ ಕೈ ಬಿಟ್ಟಾಗ ಪೋಷಕರು ಪಾತಾಳಕ್ಕೆ ಕುಸಿಯುತ್ತಾರೆ. ಆದರೆ ಆಟಿಸಂ ಹೊಂದಿರುವ ಮಕ್ಕಳು ಸಾಮಾನ್ಯರಿಗಿಂತ ಹೆಚ್ಚೇ ಬುದ್ಧಿವಂತಿಕೆಯನ್ನು ಹೊಂದಿರುವವರಾಗಿದ್ದಾರೆ ಎಂಬುದು ಕೂಡ ಸತ್ಯವಾದ ವಿಚಾರ.
ಗಗನಯಾತ್ರಿಯಾಗಲು ಬಯಸಿರುವ ಈ ಬಾಲಕಿ ನಿಪುಣ ಸಾರ್ವಜನಿಕ ಭಾಷಾಣಕಾರಳು ಆಗಿದ್ದಾಳೆ. ಸ್ಯಾಂಚೆಜ್ ನಾಸಾದಲ್ಲಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದಾಳೆ. ತನ್ನ ಗುರಿಯನ್ನು ಸಹಕಾರಗೊಳಿಸುವುದರ ಜೊತೆ ಬಾಹ್ಯಾಕಾಶ ಪರಿಶೋಧನೆ ಮತ್ತು ಗಣಿತಶಾಸ್ತ್ರದ ಕ್ಷೇತ್ರಗಳನ್ನು ಅನ್ವೇಷಿಸಲು ಮುಂದಾಗುವ ಯುವ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಲು ಆಕೆ ಮೆಕ್ಸಿಕೋದ ಸ್ಪೇಸ್ ಏಜೆನ್ಸಿಗೆ ಸಹಕರಿಸುತ್ತಿದ್ದಾರೆ.
ಸ್ಯಾಂಚೆಜ್‌ಗೆ ಮೂರು ವರ್ಷವಿರುವಾಗ ಮಾತುಕತೆಯಲ್ಲಿ ಹಿನ್ನಡೆಯಾಗಲು ಆರಂಭವಾದಾಗ ಆಟಿಸಂ ಇರುವುದು ತಿಳಿದು ಬಂದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ಯಾಂಚೆಜ್ ತಾಯಿ ಮಾತನಾಡಿದ್ದು, ಶಾಲೆಯಲ್ಲಿ ಸ್ಯಾಚೆಂಜ್ ಸ್ಥಿತಿ ನೋಡಿ ಇತರ ಮಕ್ಕಳು ಅಪಹಾಸ್ಯ ಮಾಡಲು ಶುರು ಮಾಡಿದ್ದರು, ಜೊತೆಗೆ ಆಕೆಯ ಶಿಕ್ಷಕರು ಕೂಡ ಆಕೆಯ ಬಗ್ಗೆ ಯಾವುದೇ ಕರುಣೆ ತೋರಲಿಲ್ಲ. ಈ ಕಾರಣದಿಂದ ಆಕೆ ಶಾಲೆ ಬಿಡುವಂತಹ ಸ್ಥಿತಿ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.