ಶಿವಮೊಗ್ಗ:ಹಿಂದೂಗಳಲ್ಲಿಯೂ ಕೆಲ ತಲೆಹರಟೆಗಳಿದ್ದಾರೆ ಎಂದು ಈಶ್ವರಪ್ಪ ಹೇಳುವ ವಿಡಿಯೋ ಇಂದು ವ್ಯಾಪಕವಾಗಿ ವೈರಲ್ ಆಗಿದೆ.
ನಿನ್ನೆ ಈಶ್ವರಪ್ಪ ಮಂಗಳೂರಿನಲ್ಲಿ ಬಿಜೆಪಿ ಸಭೆಯಲ್ಲಿ ಅಝಾನ್ ವಿರುದ್ಧ ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟಿದ್ದರು.ಇಂದು ಮುಸ್ಲಿಮರ ಸಭೆಯಲ್ಲಿ ಈಶ್ವರಪ್ಪ ಹಿಂದುತ್ವವಾದಿಗಳ ಬಗ್ಗೆ ಕಣ್ಣು ಕೆಂಪಾಗಿಸುವ ರೀತಿ ಹೇಳಿಕೆ ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯೂ ಕೆಲ ತಲೆಹರಟೆಗಳಿದ್ದಾರೆ.ನಾನು ಇಲ್ಲ ಅನ್ನಲ್ಲ, ಮುಸ್ಲಿಮರಲ್ಲಿಯೂ ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಹಂಚಿಕೆ ಮಾಡಲಾಗಿದೆ.ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.