ಈದ್ ದಿನ ಈದ್ಗಾದ ಹೊರಗಡೆ ನಮಾಝ್ ಮಾಡಿದ್ದಕ್ಕೆ 2000ಕ್ಕೂ ಅಧಿಕ ಜನರ ಮೇಲೆ ಕೇಸ್ ದಾಖಲು, ನಮಾಝ್ ಮಾಡಿದ ವ್ಯಕ್ತಿಗಳನ್ನು ವಿಡಿಯೋ ಮೂಲಕ ಗುರುತಿಸುತ್ತಿರುವ ಪೊಲೀಸರು
ಕಾನ್ಪುರ:ಕಳೆದ ವಾರ ಈದ್ ದಿನ ಈದ್ಗಾದ ಹೊರಗಿನ ರಸ್ತೆಯಲ್ಲಿ ಅನುಮತಿಯಿಲ್ಲದೆ ನಮಾಜ್ ಸಲ್ಲಿಸಿದ್ದಕ್ಕಾಗಿ ಮೂರು ಎಫ್‌ಐಆರ್‌ಗಳಲ್ಲಿ 2,000ಕ್ಕೂ ಹೆಚ್ಚು ಜನರನ್ನು ಹೆಸರಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ಬಜಾರಿಯಾ, ಬಾಬು ಪೂರ್ವಾ ಮತ್ತು ಜಜ್ಮೌ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ.
ರಸ್ತೆಯಲ್ಲಿ ಜನರು ನಮಾಜ್ ಮಾಡುತ್ತಿರುವ ವಿಡಿಯೋವನ್ನು ಪೊಲೀಸರು ವೀಕ್ಷಿಸುತ್ತಿದ್ದಾರೆ.
ನಮಾಜ್ ಮಾಡುವ ವ್ಯಕ್ತಿಗಳನ್ನು ವೀಡಿಯೊ ಆಧಾರದ ಮೇಲೆ ಗುರುತಿಸಲಾಗುವುದು. ನಂತರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಕ್ರಮದ ಬಗ್ಗೆ ಕೋಪಗೊಂಡ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೊಹಮ್ಮದ್ ಸುಲೇಮಾನ್ ಅವರು ಧರ್ಮದ ಆಧಾರದ ಮೇಲೆ ಅವರನ್ನು ಗುರಿಯಾಗಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈದ್ಗಾದ ಹೊರಭಾಗದ ರಸ್ತೆಯಲ್ಲಿ ಕೆಲವರು ತಡವಾಗಿ ಬಂದಿದ್ದರಿಂದ ಮತ್ತು ಆವರಣದೊಳಗೆ ಸ್ಥಳಾವಕಾಶವಿಲ್ಲದ ಕಾರಣ ನಮಾಝ್ ಮಾಡಿದ್ದರು.
ಹಿರಿಯ ಸಬ್ ಇನ್ಸ್‌ಪೆಕ್ಟರ್ (ಎಸ್‌ಎಸ್‌ಐ) ಓಂವೀರ್ ಸಿಂಗ್ ಅವರ ದೂರಿನ ಮೇರೆಗೆ ಈದ್ಗಾ ನಿರ್ವಹಣಾ ಸಮಿತಿಯ ಕೆಲವು ಸದಸ್ಯರು ಸೇರಿದಂತೆ 1,000-1,500 ಅಪರಿಚಿತ ವ್ಯಕ್ತಿಗಳ ವಿರುದ್ಧ ಬಜಾರಿಯಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಸುಮಾರು 300 ಜನರ ಮೇಲೆ ಜಜ್ಮೌ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಆದರೆ ಮೂರನೇ ಎಫ್‌ಐಆರ್ ಅನ್ನು ಬಾಬು ಪುರ್ವಾ ಪೊಲೀಸ್ ಠಾಣೆಯಲ್ಲಿ ದಾಖಳು ಮಾಡಲಾಗಿದ್ದು ಇದರಲ್ಲಿ 50 ಕ್ಕೂ ಹೆಚ್ಚು ಜನರ ಮೇಲೆ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರೋಪ ಹೊರಿಸಲಾಗಿದೆ.
ನಮಾಝ್ ಮಾಡಿದವರ ವಿರುದ್ಧ ಐಪಿಸಿಯ ವಿವಿಧ ಸೆಕ್ಸನ್ ಗಳಡಿ ಕೇಸ್ ದಾಖಲಿಸಲಾಗಿದೆ.
ಶಾಂತಿ ಸಮಿತಿಗಳ ಸಭೆಯ ನಂತರ ಈದ್ ಪ್ರಾರ್ಥನೆಯ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಯಿತು ಮತ್ತು ಬೀದಿಯಲ್ಲಿ ಪ್ರಾರ್ಥನೆ ನಡೆಸದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದರು.