ಸುಳ್ಯ: ಡಾ.ರೇಣುಕಾ ಪ್ರಸಾದ್‌ಗೆ ಜೀವಾವಧಿ ಶಿಕ್ಷೆ: ಏನಿದು ಪ್ರಕರಣ ಗೊತ್ತಾ?

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾಗಿದ್ದ ಪ್ರೊ. ಎ.ಎಸ್ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ದೋಷಿಗಳಾಗಿರುವ ಕುರುಂಜಿ ವೆಂಕಟರಮಣ ಗೌಡರ ಪುತ್ರ ಡಾ.ರೇಣುಕಾ ಪ್ರಸಾದ್ ಸೇರಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ

ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕಳೆದ ವಾರವಷ್ಟೆ ರದ್ದುಗೊಳಿಸಿದ್ದ ಹೈಕೋರ್ಟ್ ಅವರು ದೋಷಿಗಳೆಂದು ತೀರ್ಪು ನೀಡಿತ್ತು.

ಡಾ.ರೇಣುಕಾಪ್ರಸಾದ್ ಹಾಗೂ ಇತರೆ ಐವರು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿದ್ದ ಹೈಕೋರ್ಟ್ ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧ ಕೃತ್ಯದಲ್ಲಿ ದೋಷಿಗಳನ್ನಾಗಿಸಿತ್ತು.

ಆದರೆ ಏಳನೇ ಆರೋಪಿಯಾಗಿದ್ದ ಹೆಚ್.ಯು.ನಾಗೇಶ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಅಪರಾಧಿಗಳಾದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ಎಚ್.ಆರ್.ನಾಗೇಶ್, ವಾಮನ್ ಪೂಜಾರಿ, ಭವಾನಿಶಂಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ಡಾ. ರೇಣುಕಾ ಪ್ರಸಾದ್ ಅವರಿಗೆ 10 ಲಕ್ಷ ರೂ. ದಂಡವೂ ವಿಧಿಸಲಾಗಿದ್ದು, ಅದನ್ನು ಕೊಲೆಗೀಡಾದ ರಾಮಕೃಷ್ಣ ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ.

ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್ ಲಿಬೆರಲ್ ಎಜುಕೇಷನ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.ಅನಾರೋಗ್ಯದ ಕಾರಣ ಶಿಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಹಿರಿಯ ಪುತ್ರ ಕೆ.ವಿ. ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ವಹಿಸಿ ಕೊಡಲಾಗಿತ್ತು. ಮತ್ತೋರ್ವ ಪುತ್ರ ಎ.ಎಸ್. ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

2009ರಲ್ಲಿ ಚಿದಾನಂದ ಅವರ ಪರ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರಗಳನ್ನು ರಾಮಕೃಷ್ಣ ಅವರು ನೋಡಿಕೊಳ್ಳುತ್ತಿದ್ದರು ಎಂದು ರೇಣುಕಾ ಪ್ರಸಾದ್ ರಾಮಕೃಷ್ಣ ಅವರ ಕೊಲೆಗೆ ಸುಪಾರಿ ನೀಡಿದ್ದರು.

2011ರ ಏಪ್ರಿಲ್ 28ರಂದು ಸಂಜೆ 7.45 ರ ವೇಳೆಗೆ ಸುಳ್ಯದ ಅಂಬಟೆಡ್ಕ ಬಳಿಯ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಚ್ಚಿ ಕೊಲೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಟಾಪ್ ನ್ಯೂಸ್