ಮಧ್ಯಪ್ರದೇಶ;ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ರಾಜ್ಯ ರಾಜಧಾನಿ ಭೋಪಾಲ್ ನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ನಂತರ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ನಾವು ಬಜರಂಗದಳವನ್ನು ನಿಷೇಧಿಸುವುದಿಲ್ಲ. ಯಾಕೆಂದರೆ ಬಜರಂಗದಳದಲ್ಲಿಯೂ ಕೆಲವು ಒಳ್ಳೆಯ ಜನರು ಇರಬಹುದು.ಆದರೆ ಗಲಭೆ ಅಥವಾ ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೂತ್ವ ವಿಷಯದ ಬಗ್ಗೆ ಮಾತನಾಡಿದ ಸಿಂಗ್, ‘ನಾನು ಹಿಂದೂ. ನಾನು ಹಿಂದೂ ಮತ್ತು ಹಿಂದೂವಾಗಿಯೇ ಉಳಿಯುತ್ತೇನೆ.ನಾನು ಹಿಂದೂ ಧರ್ಮವನ್ನು ಅನುಸರಿಸುತ್ತೇನೆ.ನಾನು ಸನಾತನ ಧರ್ಮದ ಅನುಯಾಯಿ. ನಾನು ಎಲ್ಲಾ ಬಿಜೆಪಿ ನಾಯಕರಿಗಿಂತ ಉತ್ತಮ ಹಿಂದೂ ಎಂದು ಹೇಳಿದ್ದಾರೆ.
ಭಾರತ ದೇಶವು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಎಲ್ಲರಿಗೂ ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದೇಶವನ್ನು ವಿಭಜಿಸುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕಿ ಉಮಾ ಭಾರತಿ ನನ್ನ ಕಿರಿಯ ಸಹೋದರಿ. ಬಿಜೆಪಿ ಅವರಿಗೆ ಏನು ಮಾಡಿದೆ ಎಂಬುದನ್ನು ನೋಡಬಹುದು. ಮದ್ಯ ನಿಷೇಧದ ವಿರುದ್ಧ ಭಾರತಿ ಹೋರಾಟ ನಡೆಸಿದ್ದರು.ಆದರೆ ಅದರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ 20 ವರ್ಷಗಳಲ್ಲಿ ಬಿಜೆಪಿ ದುರಾಡಳಿತ ನಡೆಸಿದೆ. ಎಲ್ಲೆಡೆ ಭ್ರಷ್ಟಾಚಾರ ನಡೆದಿದೆ.ಉದ್ಯೋಗಗಳು,ಗುತ್ತಿಗೆಗಳು ಮತ್ತು ಧಾರ್ಮಿಕ ಕಾರ್ಯಗಳಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಸಿಂಗ್ ಆರೋಪಿಸಿದ್ದಾರೆ.