ಸರಣಿ ಸಾವು ಸಂಭವಿಸಿದ ನಾಂದೇಡ್ ನ ಆಸ್ಪತ್ರೆಯಲ್ಲಿ ಡೀನ್ ಕೈಯ್ಯಲ್ಲೇ ಟಾಯ್ಲೆಟ್ ಶುಚಿಗೊಳಿಸಿದ ಸಂಸದ

ಮಹಾರಾಷ್ಟ್ರ;ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಜನರು ಸಾವನ್ನಪ್ಪಿದ ಆಸ್ಪತ್ರೆಯ ಕೊಳಕು ಶೌಚಾಲಯವನ್ನು ಆಡಳಿತಾರೂಢ ಶಿವಸೇನೆಯ ಸಂಸದರು ಡೀನ್‌ ಕೈಯಲ್ಲಿ ಶುಚಿಗೊಳಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಆಸ್ಪತ್ರೆಯಲ್ಲಿನ ಈ ಸಾವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಆ ಬಳಿಕ ಶಿವಸೇನೆ (ಶಿಂಧೆ ಬಣ) ಸಂಸದ ಹೇಮಂತ್ ಪಾಟೀಲ್ ಅವರು ಮಂಗಳವಾರ ಶಂಕರರಾವ್ ಚವ್ಹಾಣ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಕೊಳಚೆ ಶೌಚಾಲಯ ಇರುವುದನ್ನು ಗಮನಿಸಿದ ಪಾಟೀಲ್ ಆಸ್ಪತ್ರೆಯ ಡೀನ್ ಶ್ಯಾಮರಾವ್ ವಾಕೋಡೆ ಅವರನ್ನು ಕರೆಸಿ ಅದನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ.

ಡೀನ್ ಶೌಚಾಲಯವನ್ನು ಶುಚಿಗೊಳಿಸುವಾಗ ಸಂಸದರು ನಿಂತುಕೊಂಡು ಪೈಪ್‌ನ್ನು ಹಿಡಿದಿರುವುದು ವೀಡಿಯೊಗಳಲ್ಲಿ ಕಂಡು ಬಂದಿದೆ. ಡೀನ್‌ ಟಾಯ್ಲೆಟ್‌ ಸ್ವಚ್ಛಗೊಳಿಸುವಾಗ ಸಂಸದರು ಟಾಯ್ಲೆಟ್‌ಗೆ ಪೈಪ್‌ ಮೂಲಕ ನೀರು ಹಾಕುವುದು ಕಂಡು ಬಂದಿದೆ.

ಸೋಮವಾರ ಇದೇ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ಸಾವುಗಳು ಸಂಭವಿಸಿದೆ ಮತ್ತು ಮಂಗಳವಾರ 48 ಗಂಟೆಗಳಲ್ಲಿ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಇನ್ನು 71 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಆದರೆ ಡೀನ್ ವಕೋಡೆ ಅವರು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿಗಳು ಅಥವಾ ವೈದ್ಯರ ಕೊರತೆಯಿಲ್ಲ ಎಂದು ಹೇಳಿದ್ದಾರೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದರು.

ಟಾಪ್ ನ್ಯೂಸ್