ಚುನಾವಣೆ ಹಿನ್ನೆಲೆ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಮಹತ್ವದ ಸಲಹೆ..

ಮಂಗಳೂರು:ಚುನಾವಣೆ ನೀತಿ‌ ಸಂಹಿತೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ರವಿಕುಮಾರ್ ಎಂ.ಆರ್ ಅವರು ಸುದ್ದಿಗೋಷ್ಟಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಡಿಸಿ, ಮಾಲ್‍ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನಚಿತ್ರ ಮಂದಿರಗಳು ಇತ್ಯಾದಿಗಳ ಮಾಲೀಕರೊಂದಿಗೆ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಸಂಪರ್ಕ ಇದ್ದಲ್ಲಿ ಅವರು ಈ ವೇದಿಕೆಗಳನ್ನು ಬಳಸಿಕೊಂಡು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲು ಅವಕಾಶ ನೀಡಬಾರದು.ಒಂದು ವೇಳೆ ಉಲ್ಲಂಘನೆ ಕಂಡು ಬಂದಲ್ಲಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು, ಸಭೆ ಸಮಾರಂಭ ಮಾಡಬೇಕಾದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದು ಕಾರ್ಯಕ್ರಮ ಏರ್ಪಡಿಸಬೇಕು. ಮತದಾರರಿಗೆ ಆಮಿಷವೊಡ್ಡುವುದು, ಅಕ್ರಮ ಹಣ, ಮದ್ಯ, ಕುಕ್ಕರ್, ಸೀರೆ, ಡ್ರಗ್ಸ್, ಇತ್ಯಾದಿ ಉಡುಗೊರೆಗಳನ್ನು ಶೇಖರಣೆ ನೀಡಲು ಅವಕಾಶವವಿಲ್ಲ, ಇದು ಕಂಡು ಬಂದಲ್ಲಿ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಒಂದು ವೇಳೆ ರಾಜಕೀಯ ಪಕ್ಷಗಳ ಮುಖಂಡರು, ಪಕ್ಷದವರು ಹಾಗೂ ಅಭ್ಯರ್ಥಿ ಸಭೆ ಸಮಾರಂಭ ಮಾಡಬೇಕು ಎಂದಾದಲ್ಲಿ ಚುನಾವಣಾಧಿಕಾರಿಯ ಅನುಮತಿ ಪಡೆಯಬೇಕು, ಸಮಾರಂಭದ ಚಟುವಟಿಕೆಗಳನ್ನು ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವಿವಿಂಗ್ ತಂಡದವರು ಚಿತ್ರೀಕರಿಸಿಕೊಳ್ಳುವರು, ನೀತಿ ಸಮಿತಿ ಉಲ್ಲಂಘನೆ ಆದರೆ ಪ್ರಕರಣ ದಾಖಲಿಸಲಾಗುವುದು.ಇನ್ನು ಯಾವುದೇ ರೀತಿಯ ಧಾರ್ಮಿಕ ಸಮಾರಂಭಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ರಾಜಕೀಯ ಪಕ್ಷಗಳು ವೇದಿಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಯಾವುದೇ ಧರ್ಮ, ಜಾತಿಯ ಬಗ್ಗೆ ಅವಹೇಳನ ಮಾಡುವಂತಿಲ್ಲ, ಮುಖ್ಯವಾಗಿ ಬ್ಯಾನರ್, ಬಂಟಿಂಗ್ಸ್, ಕಟೌಟ್‍ಗಳನ್ನ ಹಾಕಲು ಅವಕಾಶವಿರುವುದಿಲ್ಲ, ಮನೆಯವರೇ ಅಭ್ಯರ್ಥಿಯಾಗಿದ್ದರೂ ಕೂಡ ಅನುಮತಿ ಇಲ್ಲದೆ ಹಾಕಲು ಅವಕಾಶವಿರುವುದಿಲ್ಲ, ಈ ಹಿಂದೆಯೇ ಪೂರ್ವ ನಿಗದಿಯಾಗಿದ್ದ ಮದುವೆಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ ಎಂದು ಹೇಳಿದರು.

ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯನ್ನು ಪಾಲಿಸಬೇಕು, ಮತದಾನಕ್ಕೆ 48 ಗಂಟೆಗಳು ಇರುವಾಗ ಯಾವುದೇ ಮದುವೆ ಮಂಟಪಗಳು, ಸಭಾಭವನದಲ್ಲಿ ಹೊರ ಜಿಲ್ಲೆಯವರು ಇರುವಂತಿಲ್ಲ.

ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸುವಂತಿಲ್ಲ, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ. ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಾಮಾಣಿಕರಣ ಹಾಗೂ ದೃಢೀಕರಣ ಸಮಿತಿಯಿಂದ ಅನುಮತಿ ಪಡೆದು ಪ್ರಕಟಿಸಬೇಕು ಎಂದು ಹೇಳಿದರು.

ಟಾಪ್ ನ್ಯೂಸ್