ತಮಿಳುನಾಡು; ದಲಿತ ಮಹಿಳೆ ತಯಾರಿಸಿದ ಉಪಹಾರ ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸಿದ ಘಟನೆ ತಮಿಳುನಾಡಿನ ಕರೂರು ಜಿಲ್ಲೆಯ ಅರವಾಕುರಿಚಿ ಬಳಿಯ ವೆಲಾಂಚೆಟ್ಟಿಯೂರ್ ಪಂಚಾಯತ್‌ನ ಶಾಲೆಯೊಂದರಲ್ಲಿ ನಡೆದಿದೆ.
30 ಮಕ್ಕಳಲ್ಲಿ 15 ಮಕ್ಕಳು ದಲಿತ ಮಹಿಳೆ ಅಡುಗೆ ತಯಾರಿಸಿದ್ದಾರೆಂದು ಊಟ ಮಾಡಲು ನಿರಾಕರಿಸಿದ್ದಾರೆ.
ಮಂಗಳವಾರ ಶಾಲೆಗೆ ಭೇಟಿ ನೀಡಿ ಉಪಹಾರ ಯೋಜನೆ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ವಿದ್ಯಾರ್ಥಿಗಳ ಪೋಷಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಕ್ಕಳ ಪೋಷಕರು ದಲಿತ ಮಹಿಳೆ ಸುಮತಿ ಅವರು ಆಹಾರವನ್ನು ತಯಾರಿಸುತ್ತಿದ್ದಾರೆ.ದಲಿತ ಮಹಿಳೆ ಆಹಾರ ತಯಾರಿಸಿದ ಕಾರಣಕ್ಕೆ ನಮ್ಮ ಮಕ್ಕಳು ಶಾಲೆಯಲ್ಲಿ ಊಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಟಿ.ಪ್ರಭುಶಂಕರ್, ದಲಿತ ಮಹಿಳೆ ಎಂಬ ಕಾರಣಕ್ಕೆ ಅವಮಾನ ಮಾಡಿದರೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ವಿದ್ಯಾರ್ಥಿಗಳ ಪೋಷಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಆಹಾರ ಸೇವನೆಗೆ ಅವಕಾಶ ನೀಡುವಂತೆ ಪೋಷಕರಿಗೆ ಆಗ್ರಹಿಸಿದ್ದಾರೆ.
ಇದಲ್ಲದೆ ಶಾಲೆಯಲ್ಲಿ ದಲಿತ ಮಹಿಳೆ ಸುಮತಿ ಎಂಬವರು ಸಿದ್ಧಪಡಿಸಿದ್ದ ಭೋಜನವನ್ನು ಒಗ್ಗಟ್ಟಿನ ಪ್ರದರ್ಶನದ ಭಾಗವಾಗಿ ಜಿಲ್ಲಾಧಿಕಾರಿ ಮಕ್ಕಳ ಜೊತೆ ಸೇವಿಸಿದ್ದಾರೆ.