ಬೆಂಗಳೂರು; ದೂರು ನೀಡಲು ಹೋದ ವಕೀಲರನ್ನು ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಆರೋಪದಡಿ ಯಲಹಂಕ ರಾಜಾನುಕುಂಟೆ ಠಾಣಾ ಪೊಲೀಸರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಶ್ಯಾನಬೋಗನಹಳ್ಳಿಯ ಸರಕಾರಿ ಜಮೀನು ವಿಚಾರವಾಗಿ ಗ್ರಾಮ ಪಂಚಾಯತಿಯಲ್ಲಿ ಜಗಳ ನಡೆದಿದೆ. ಈ ವಿಚಾರವಾಗಿ ವಕೀಲ ಚಂದ್ರಶೇಖರ ಮತ್ತು ಸಹೋದರ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಎರಡು ಕಡೆಯವರ ವಿಚಾರಣೆ ಮಾಡುತ್ತಿದ್ದ ವೇಳೆ ವಕೀಲ ಚಂದ್ರಶೇಖರ ಅವರನ್ನು ರಾಜಾನುಕುಂಟೆ ಪೊಲೀಸ್ ಇನ್ಸ್ ಪೆಕ್ಟರ್ ಸೆಲ್ ಒಳಗಡೆ ಹಾಕಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ವಕೀಲರನ್ನು ಸೆಲ್ ಒಳಗಡೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಸಂಬಂಧ ಠಾಣೆಯ ಸಿಬ್ಬಂದಿ ಕಿರಣ್ ಮತ್ತು ಮೋಹನ್ ಎಂಬವರನ್ನು ಎಸ್‍ಪಿ ಅಮಾನತು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಅವರು ಅಮಾಯಕ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ ಎಂದು ದೂರುದಾರ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದು, ದೌರ್ಜನ್ಯ ಎಸಗಿದ ಇನ್ಸ್ ಪೆಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.