ಬೆಂಗಳೂರು; ಕಾಂಗ್ರೆಸ್ ಸೇರ್ಪಡೆ ಕುರಿತ ಊಹಾಪೋಹಗಳ ಬಗ್ಗೆ ಮಾಜಿ ಸಚಿವ ರೇಣುಕಾಚಾರ್ಯ ಸ್ಪಷ್ಟನೆಯನ್ನು ನೀಡಿದ್ದು, ನಾನು ಬಿಜೆಪಿಯ ಕಟ್ಟಾಳು, ಕಾಂಗ್ರೆಸ್ ಗೆ ಸೇರ್ಪಡೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಈ ಕುರಿತು ಸುದ್ದಿಗಾರರ ಜೊತೆ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನೆಗಳಿಗೆ ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿ ಹೋಗಿದ್ದೇನೆ.ಅವರು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾನು ಕೂಡ ಪ್ರೀತಿಯಿಂದಲೇ ಮಾತನಾಡುತ್ತೇನೆ. ಅಂದ ಮಾತ್ರಕ್ಕೆ ಕಾಂಗ್ರೆಸ್ ಸೇರಲು ಹೋದಂತಾಗುತ್ತದೆಯೇ ಎಂದು ರೇಣುಕಾಚಾರ್ಯ ಅವರು ಪ್ರಶ್ನಿಸಿದ್ದಾರೆ.
ನಾನು ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲವೇ ಅಲ್ಲ. ಬಿಜೆಪಿ ಕಾಲದಿಂದಲೂ ಹೋರಾಟ ಮಾಡಿಕೊಂಡು ಬಂದವನು.ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ರಾಮಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ ಎಂದು ಹೇಳಿದ್ದಾರೆ.
1990ರಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದೇನೆ. ಯಡಿಯೂರಪ್ಪ ನನ್ನನ್ನು ಗುರುತಿಸಿ ಟಿಕೆಟ್ ಕೊಡದೆ ಹೋಗಿದ್ದರೆ ರಾಜ್ಯದ ಜನರಿಗೆ ರೇಣುಕಾಚಾರ್ಯ ಯಾರು ಎಂಬುದು ಗೊತ್ತೇ ಆಗುತ್ತಿರಲಿಲ್ಲ
ಯಡಿಯೂರಪ್ಪ ನನಗೆ ಮಾರ್ಗದರ್ಶಕರು. ಈಗ ಪಕ್ಷಕ್ಕೆ ಬಂದ ಕೆಲವರು ನನ್ನ ಬಗ್ಗೆ ಟೀಕೆ ಮಾಡಿದ್ದಾರೆ. ಅವರಿಗೆ ಈಗ ಉತ್ತರ ಕೊಡುವುದಿಲ್ಲ. ರೇಣುಕಾಚಾರ್ಯ “ನಾಟ್ ರೀಚಬಲ್’ ಎಂದು ಸಿ.ಟಿ. ರವಿ ಹೇಳಿದ್ದಾರೆ. ನಾನೇನು ಸಣ್ಣ ಮಗು ಅಥವಾ ಲಾಲಿಪಾಪ್ ತಿನ್ನುವವನಲ್ಲ. ಕಾಲಾಯ ತಸ್ಮೈ ನಮಃ, ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಸಹ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರನ್ನು ನಾನು ದ್ವೇಷ ಮಾಡಲಿಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.