ಉಳ್ಳಾಲ:ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ನಿಂದ ವರದಿಯಾಗಿದೆ.
ಉಳ್ಳಾಲ ಅಬ್ಬಕ್ಕ ವೃತ್ತದಿಂದ ದೇರಳಕಟ್ಟೆವರೆಗೆ ಎಸ್ಡಿಪಿಐ ಹಮ್ಮಿಕೊಂಡಿದ್ದ ರಿಕ್ಷಾ ಹಾಗೂ ಬೈಕ್ ರ್ಯಾಲಿ ವೇಳೆ
ಕಾಂಗ್ರೆಸ್ ಕಾರ್ಯಕರ್ತ ನೌಫಾಲ್ (35) ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಾಟೆಕಲ್ ಸಮೀಪ ಅಸೈಗೋಳಿಯಿಂದ ಚೆಂಬುಗುಡ್ಡೆ ಸಾರ್ವಜನಿಕ ಸಭೆಗೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಚಾರದ ವಾಹನ ಎಸ್ ಡಿಪಿಐ ಅವರ ರ್ಯಾಲಿಗೆ ನಾಟೆಕಲ್ ಸಮೀಪ ಎದುರಾಗಿತ್ತು.ಈ ವೇಳೆ ಕಾಂಗ್ರೆಸ್ ಪರವಾಗಿ ಹಾಕಿದ್ದ ಹಾಡನ್ನು ನಿಲ್ಲಿಸುವಂತೆ ಕೆಲವರು ಸೂಚಿಸಿದ್ದರು. ಇದಕ್ಕೆ ರಿಕ್ಷಾ ಚಾಲಕ ಸ್ಪಂದಿಸದೆ ವಾಹನಕ್ಕೆ ಅಡ್ಡ ಇದ್ದವರಿಗೆ ಹಾರ್ನ್ ಹಾಕಲು ಆರಂಭಿಸಿದ್ದಾರೆ. ಇದರಿಂದ ಚಾಲಕ ನೌಫಾಲ್ ನ ಕಾಲರ್ ಪಟ್ಟಿ ಹಿಡಿದೆಳೆದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಗಾಯಾಳು ನೌಫಾಲ್ ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಓರ್ವನಿಗೆ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.