ಬೆಂಗಳೂರು:ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಮುತ್ತಯ್ಯ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸ್ ತನಿಖೆಯಲ್ಲಿ ಮಹತ್ವದ ಅಂಶ ಬಯಲಾಗಿದೆ.
ಬಸ್‌ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡು ಸಜೀವ ದಹನವಾಗಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗುತ್ತಿತ್ತು. ಆದರೆ ಬಸ್ ನಲ್ಲಿ ಇಂಜಿನ್ ದೋಷವಿರಲಿಲ್ಲ,ಇದೊಂದು ಹತ್ಯೆಯೂ ಅಲ್ಲ. ಬದಲಾಗಿ ಕಂಡೆಕ್ಟರ್ ಮುತ್ತಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.
ಲಿಂಗಧೀರನಹಳ್ಳಿ ಡಿಪೋದ ಬಸ್‌ನಲ್ಲಿದ್ದ ಮುತ್ತಯ್ಯ ಘಟನೆ ದಿನ ಮಧ್ಯರಾತ್ರಿ ಒಂದು ಗಂಟೆಯವರೆಗೂ ಫೋನ್ ಸಂಭಾಷಣೆ ನಡೆಸಿದ್ದರು.ಆ ಬಳಿಕ ಚಾಲಕ ಪ್ರಕಾಶ್ ಗೆ ರೂಮಿನಲ್ಲಿ ಮಲಗುವಂತೆ ಹೇಳಿ, ಆ ಮಾರ್ಗದ ಕಲೆಕ್ಷನ್ ಹಣವನ್ನು ಅವರ ಕೈಗೆ ನೀಡಿದ್ದಾರೆ.ಚಾಲಕ ಮಲಗಿದ ಬಳಿಕ ಮುತ್ತಯ್ಯ ಬಸ್ಸಿನಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗಿದೆ.
ಅದೇ ದಿನ ರಾತ್ರಿ ವೇಳೆ ಮುತ್ತಯ್ಯ ಅವರ ಯುಪಿಐ ಐಡಿಯಿಂದ 700 ರೂಪಾಯಿ ಹಣ ವರ್ಗಾವಣೆಯಾಗಿದೆ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ.ಬಂಕ್‌ನಿಂದ ಮುತ್ತಯ್ಯ ಐದು ಲೀಟರ್ ಪೆಟ್ರೋಲ್, ಎರಡು ಲೀಟರ್ ಡೀಸೆಲ್ ನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಹಣಕಾಸಿನ ತೊಂದರೆಗೆ ಸಿಲುಕಿದ್ದ ಮುತ್ತಯ್ಯ ಮುಂಜಾನೆ ವೇಳೆಗೆ ಬಸ್‌ನ ಎಲ್ಲ ಕಿಟಕಿಗಳು ಹಾಗೂ ಡೋರ್ ನ್ನು ಒಳಗಿನಿಂದ ಮುಚ್ಚಿ ಪೆಟ್ರೋಲ್, ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿರ ಶಂಕೆ ವ್ಯಕ್ತವಾಗಿದೆ.