ಕಾಲೇಜಿನ ಪ್ಯಾಶನ್ ಶೋನಲ್ಲಿ ಬುರ್ಖಾ ಧರಿಸಿ ಕ್ಯಾಟ್ ವಾಕ್; ವಿವಾದ

ಉತ್ತರಪ್ರದೇಶದ ಕಾಲೇಜೊಂದರ ಫ್ಯಾಷನ್ ಶೋನಲ್ಲಿ ಬುರ್ಖಾ ಧರಿಸಿ ಕ್ಯಾಟ್‌ವಾಕ್‌ ನಡೆಸಿದ್ದು ಜಮಿಯತ್ ಉಲಾಮಾ-ಇ-ಹಿಂದ್ ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಈ ಬಗ್ಗೆ ಮಾತನಾಡಿದ ಮುಜಾಫರ್‌ನಗರದ ಜಮಿಯತ್ ಉಲಮಾ-ಇ-ಹಿಂದ್ ಸಂಚಾಲಕ ಮೌಲಾನಾ ಮುಕರ್ರಂ ಖಾಸ್ಮಿ, ಕಾರ್ಯಕ್ರಮದ ಆಯೋಜಕರು ಧರ್ಮವನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ಸಾಂಪ್ರದಾಯಿಕ ಉಡುಪನ್ನು ಅಗೌರವದಿಂದ ಚಿತ್ರಿಸಲಾಗಿದೆ. ಈ ಬಗ್ಗೆ ಕಾರ್ಯಕ್ರಮದ ಆಯೋಜಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಜಾಫರ್‌ನಗರದ ಶ್ರೀ ರಾಮ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಫ್ಯಾಷನ್ ಶೋ ವಿಡಿಯೋ ವೈರಲ್‌ ಬಳಿಕ ವಿವಾದ ಭುಗಿಲೆದ್ದಿದೆ. ವಿಡಿಯೋದಲ್ಲಿ ಬುರ್ಖಾ ಧರಿಸಿ ಕ್ಯಾಟ್‌ವಾಕ್‌ ಮಾಡುವುದು ಸೆರೆಯಾಗಿತ್ತು.

ಬುರ್ಖಾ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಇದು ಪರ್ದಾ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ಫ್ಯಾಶನ್ ಶೋನಲ್ಲಿ ಬುರ್ಖಾವನ್ನು ಪ್ರದರ್ಶನದ ವಸ್ತುವಾಗಿ ಪರಿಗಣಿಸಬಾರದು. ಈ ಘಟನೆಯು ವಸ್ತ್ರಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಖಾಸ್ಮಿ ಹೇಳಿದ್ದು, ಬುರ್ಖಾವನ್ನು ಈ ರೀತಿಯಾಗಿ ಬಳಸಿರುವುದು ಖಂಡನೀಯ ಮತ್ತು ಕಾಲೇಜು ಆಡಳಿತಾಧಿಕಾರಿಗಳು ತಕ್ಷಣ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

ಅವರು ಕ್ಷಮೆಯಾಚಿಸಲು ವಿಫಲವಾದರೆ, ನಮ್ಮ ಸಂಘಟನೆಯು ಕಾಲೇಜು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇಂತಹ ಘಟನೆ ಧಾರ್ಮಿಕ ಭಾವನೆಗಳನ್ನು ಅಗೌರವಿಸುವುದು ಮಾತ್ರವಲ್ಲದೆ ಸಾಂಸ್ಕೃತಿಕ ಆಚರಣೆಗಳ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುತ್ತವೆ ಎಂದು ಜಮಿಯತ್ ಉಲಮಾ-ಇ-ಹಿಂದ್ ಸಂಚಾಲಕ ಮೌಲಾನಾ ಮುಕರ್ರಂ ಖಾಸ್ಮಿ ಹೇಳಿದ್ದಾರೆ.

ಬುರ್ಖಾ ಅಥವಾ ಫರ್ದಾ ಎನ್ನುವುದು ಮುಸ್ಲಿಂ ಮಹಿಳೆಯರು ಬಳಸುವ ವಸ್ತ್ರವಾಗಿದೆ. ಬುರ್ಖಾ ಇತರ ವಸ್ತ್ರಗಳಂತೆ ಕೇವಲ ವಸ್ತ್ರವಲ್ಲ ಅದು ಇಸ್ಲಾಂ ಧರ್ಮದ ಧಾರ್ಮಿಕ ನಂಬಿಕೆಯ ಒಂದು ಭಾಗ. ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವ ಸಂದರ್ಭಗಳಲ್ಲಿ ಬುರ್ಖಾವನ್ನು ಧರಿಸುತ್ತಾರೆ. ಬುರ್ಖಾ ಎಲ್ಲಾ ಕೆಟ್ಟ ದೃಷ್ಠಿಯಿಂದ ಮಹಿಳೆಯರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇಸ್ಲಾಂ ಧರ್ಮದಲ್ಲಿದೆ.

ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಇಸ್ಲಾಮಿನ ಕಡ್ಡಾಯ ನಿಯಮಗಳಲ್ಲಿ ಒಂದಾಗಿದೆ. ಮಹಿಳೆಯರು ತಮ್ಮ ಎರಡು ಕಣ್ಣುಗಳು ಮತ್ತು ಮುಂಗೈಗಳನ್ನು ಹೊರತು ಇತರ ಯಾವುದೇ ಅಂಗಾಗಳನ್ನು ತನ್ನ ಪತಿ, ಪೋಷಕರು ಮತ್ತು ಸಹೋದರರನ್ನು ಹೊರತು ಪಡಿಸಿ ಇತರ ಯಾವುದೇ ಅನ್ಯ ಪುರುಷನಿಗೆ ಪ್ರದರ್ಶಿಸಬಾರದೆಂಬ ನಿಯಮ ಇಸ್ಲಾಮಿನಲ್ಲಿದೆ. ಅದಕ್ಕಾಗಿ ಸಂಪೂರ್ಣ ಮೈಮುಚ್ಚಲು ಬುರ್ಖಾವನ್ನು ಧರಿಸಲಾಗುತ್ತದೆ. ಆದರೆ ಇದೇ ಸಾಂಪ್ರದಾಯಿಕ ವಸ್ತ್ರವನ್ನು ಫ್ಯಾಷನ್‌ ಶೋನಲ್ಲಿ ಬಳಸಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಟಾಪ್ ನ್ಯೂಸ್