ಕಾಂಗ್ರೆಸ್ ಸರಕಾರ ಬಿಜೆಪಿ ಅವಧಿಯ 40% ಕಮಿಷನ್, PSI ನೇಮಕಾತಿ ಹಗರಣದ ಮರು ತನಿಖೆ ನಡೆಸಲಿದೆಯಾ? ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ರೋಹಿತ್ ಚಕ್ರತೀರ್ಥಗೂ ಎದುರಾಗಲಿದೆಯಾ ಸಂಕಷ್ಟ? ಏನಿದು ಬೆಳವಣಿಗೆ?

ಬೆಂಗಳೂರು;ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪಠ್ಯಪುಸ್ತಕ ಪರಿಷ್ಕರಣೆಯನ್ನು ರದ್ದು ಮಾಡಬೇಕು ಮತ್ತು ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಿ, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಮನ್ವಯ ವೇದಿಕೆಯು ಒತ್ತಾಯಿಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಮನ್ವಯ ವೇದಿಕೆ ಸಂಸ್ಥಾಪಕ, ಶಿಕ್ಷಣ ತಜ್ಞ ವಿ.ಪಿ.ನಿರಂಜನರಾಧ್ಯ ಅವರು, ”ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ತಿರಸ್ಕರಿಸಬೇಕು ಹಾಗೂ ‘ರಾಜ್ಯ ಶಿಕ್ಷಣ ನೀತಿ’ ರೂಪಿಸಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಮೊದಲು ಆಡಳಿತ ನಡೆಸಿದ್ದ ಬಿಜೆಪಿ ಶಿಕ್ಷಣ ಕ್ಷೇತ್ರವನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ. ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಆಗುವವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಪರಿಷ್ಕೃತ ಪಠ್ಯವನ್ನು ಕೈಬಿಟ್ಟು, 2017-18ರಲ್ಲಿ ಜಾರಿಯಲ್ಲಿದ್ದ ಪಠ್ಯಕ್ರಮ ಮುಂದುವರೆಸಬೇಕು ಎಂದು ಆಗ್ರಹಿಸಲಾಗಿದೆ.

ಇದಲ್ಲದ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಸಮಿತಿ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಮರು ತನಿಖೆ?

ಇನ್ನು ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಅನೇಕ ಹಗರಣಗಳ ಆರೋಪಗಳ ಕುರಿತು ಮರು ತನಿಖೆ ಮಾಡಲು ಸರಕಾರ ಕ್ರಮ ವಹಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಪಿಎಸ್ಸೈ ನೇಮಕಾತಿ, ಶೇ.40ರಷ್ಟು ಕಮಿಷನ್ ಆರೋಪ ಸೇರಿ ಎಲ್ಲ ಹಗರಣಗಳ ಬಗ್ಗೆ ತನಿಖೆ ನಡೆಸಲಾಗಿದೆಯಾದರೂ ಅವು ತೃಪ್ತಿಕರವಾಗಿಲ್ಲ.ಹೀಗಾಗಿ, ನೂತನ ಕಾಂಗ್ರೆಸ್ ಸರಕಾರವು ಆ ಎಲ್ಲ ಹಗರಣಗಳ ಮರು ತನಿಖೆ ಮಾಡಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಸರಕಾರದಲ್ಲಿ ಆಗಿರುವ ಹಗರಣಗಳ ವಿರುದ್ಧವೇ ಕಾಂಗ್ರೆಸ್ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದೆ. ಈಗ ನಾವು ಸುಮ್ಮನಾದರೆ ಜನರು ನಮ್ಮನ್ನು ತಪ್ಪಾಗಿ ಅರ್ಥೈಸುತ್ತಾರೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ಟಾಪ್ ನ್ಯೂಸ್