ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗಾಗಿ ಚುಚ್ಚುಮದ್ದನ್ನು ಆಮದು ಮಾಡಿಕೊಳ್ಳಬೇಕಿದ್ದು ಚುಚ್ಚು ಮದ್ದಿನ ಆಮದು ತೆರಿಗೆಯನ್ನು ಮನ್ನಾ ಮಾಡುವಂತೆ ಮತ್ತು ಆರ್ಥಿಕವಾಗಿ ಸಹಾಯ ಮಾಡುವಂತೆ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆಯನ್ನು ಗುಣಪಡಿಸಬಹುದಾದ ಝೋಲ್ಗೆನ್‌ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಅದರ ಬೆಲೆ ರೂ.17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ನಮ್ಮ ರಾಜ್ಯದ ಚಿಕ್ಕ ಮಗುವಿಗೆ ಸಂಬಂಧಿಸಿದ ಒಂದು ಪ್ರಮುಖ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಕರ್ನಾಟಕದ ಮೌರ್ಯ ಎಂಬ 15 ತಿಂಗಳ ಬಾಲಕ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಾಲಕನಿಗೆ ‘ಝೋಲ್ಗೆನ್ಸ್ಮಾ’ ಎಂಬ ದುಬಾರಿ ಚುಚ್ಚುಮದ್ದನ್ನು ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಈ ಔಷಧಿಯ ವೆಚ್ಚವು ಸುಮಾರು 17.5 ಕೋಟಿ ರೂ.ಗಳಷ್ಟಿದೆ. ಈ ಚಿಕಿತ್ಸೆಯನ್ನು ನೀಡಲು ಬಾಲಕನ ಕುಟುಂಬವು ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಔಷಧದ ಬೆಲೆಯೇ ಅಗಾಧವಾಗಿದ್ದರೆ, ಆಮದು ತೆರಿಗೆಗಳು ಕೂಡ ಗಣನೀಯವಾಗಿ ಹೆಚ್ಚಳವಾಗುತ್ತದೆ. ಆರ್ಥಿಕ ಹೊರೆಯಿಂದ ಈ ಜೀವ ಉಳಿಸುವ ಔಷಧಿಯನ್ನು ಪಡೆಯಲು ಕುಟುಂಬವು ಹೆಣಗಾಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.