ಕಲಬುರ್ಗಿ; ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಬೇಕಿದ್ದ ಚುನಾವಣೆ ಸಮಾವೇಶವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಕಲಬುರಗಿ ಎಸ್‌ಪಿ ಇಶಾ ಪಂತ್ ಅವರು ಸಮಾವೇಶದ ಸ್ಥಳ ಪರಿಶೀಲನೆ ಮಾಡಿದ್ದರು. ಸಮಾವೇಶದ ಆಯೋಜನೆಗೆ ಸಕಲ ಸಿದ್ಧತೆಯನ್ನೂ ಕೈಗೊಳ್ಳಲಾಗಿತ್ತು. ಆದರೆ ಈಗ ಏಕಾಏಕಿ ಸಮಾವೇಶವನ್ನು ರದ್ದುಗೊಳಿಸಲಾಗಿದೆ.
ಚಿತ್ತಾಪುರದಲ್ಲಿನ ಮೋದಿಯ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಕಟಣೆ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರ ಪ್ರಚಾರ ಮಾಡುವವರಿದ್ದರು.
ರೌಡಿಶೀಟರ್ ಆಗಿರುವ ಮಣಿಕಂಠ ಅವರ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅವರ ಮೇಲೆ ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡಿದ ಆರೋಪ ಇರುವುದರಿಂದ ಮಣಿಕಂಠ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಪ್ರಧಾನಿ ಅವರನ್ನು ಕರೆಸಿದರೆ ಪಕ್ಷಕ್ಕೆ ಮುಜುಗರವಾಗಬಹುದು ಎಂಬ ಆತಂಕದಿಂದ ಸಭೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆದರೆ ಬಿಜೆಪಿ ಮೂಲಗಳು ಸಮಾವೇಶಕ್ಕೆ ರದ್ಧತಿಗೆ ಯಾವುದೇ ಕಾರಣ ತಿಳಿಸಿಲ್ಲ ಎನ್ನಲಾಗಿದೆ.
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ಅವರಿಗೆ ವಯಸ್ಸು ಕೇವಲ 26. ಆದರೆ ಅವರ ವಿರುದ್ಧ ಹಲವು ಪ್ರಕರಣಗಳು ಇವೆ ಎಂದು ಕಾಂಗ್ರೆಸ್ ಈ ಮೊದಲು ಆರೋಪಿಸಿತ್ತು.