ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ;ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ
ಚಿಂಚೋಳಿ;ತಂದೆಯೋರ್ವ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಂಚೋಳಿಯಲ್ಲಿ ನಡೆದಿದೆ.
ಕುಂಚಾವರಂ ಗ್ರಾಮದ ಹನುಮಂತ (36), ಅಕ್ಷತಾ (6), ಓಂಕಾರ (9) ಮೃತಪಟ್ಟರು.
ಹನುಮಂತ ಹೈದರಾಬಾದ್ ಗೆ ಕೂಲಿ ಕೆಲಸ ಮಾಡುತ್ತಿದ್ದ.ನಿನ್ನೆ ತನ್ನ ಮಕ್ಕಳನ್ನು ಕರೆದುಕೊಂಡು ಊರಿಗೆ ಬಂದಿದ್ದ. ಬಳಿಕ ಅಣ್ಣ ಗೋಪಾಲನಿಗೆ ಕರೆ ಮಾಡಿ ನಾನು ಮತ್ತು ನನ್ನ ಮಕ್ಕಳು ಬಾವಿಗೆ ಬಿದ್ದು ಸಾಯುತ್ತಿದ್ದೇವೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಗಾಬರಿಗೊಂಡ ಸಹೋದರ ಕುಂಚಾವರಂ ಪೊಲೀಸರಿಗೆ ಮತ್ತು ನೆರೆಯ ತೆಲಂಗಾಣ ಬಟ್ವಾರಂ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಹುಡುಕಾಟ ನಡೆಸಿದಾಗ ಪೊಚಾವರಂ ಗ್ರಾಮದ ಬಾವಿಯ ಬಳಿ ಚಪ್ಪಲಿ ಕಂಡು ಬಂದಿದೆ.ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸಿದಾಗ ಹನುನಂತ ಬೆನ್ನಿಗೆ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಬಾವಿಗೆ ಹಾರಿ ಮೃತಪಟ್ಟಿರುವುದು ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸಪಿ ಕೆ.ಬಸವರಾಜ, ಚಿಂಚೋಳಿ ಸಿಪಿಐ ಅಂಬಾರಾಯ ಕಾಮನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಪತ್ನಿಯನ್ನು ಬಿಟ್ಟು ಬಂದು ಹನುಮಂತ ಮಕ್ಕಳನ್ನು ಕೊಲ್ಲುವ ಜೊತೆಗೆ ತಾನೂ ಸಾಯುವ ಕಠೋರ ನಿರ್ಧಾರಕ್ಕೆ ಬಂದಿದ್ದೇಕೆ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.