ಚಿಕ್ಕಮಗಳೂರು: ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪ ಅರಣ್ಯ ವಿಭಾಗದ ಡಿಎಫ್‌ಒ ನೇತೃತ್ವದ ಅಧಿಕಾರಿಗಳ ತಂಡ ವಿನಯ್ ಗುರೂಜಿ ಆಶ್ರಮದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಸಂಬಂಧ ಸ್ಪಷ್ಟನೆ ನೀಡಿರುವ ಗುರೂಜಿ, ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಯಾವುದೇ ಸಮಯದಲ್ಲಿ ತನಿಖೆ ನಡೆಸಿದರೂ ತನಿಖೆಗೆ ಸಿದ್ದವಿದ್ದೇನೆ ಎಂದು ಹೇಳಿದ್ದಾರೆ.
ಆಶ್ರಮದಲ್ಲಿ ಒಂದು ದಿನ ಮಾತ್ರ ಹುಲಿ ಚರ್ಮ ಇತ್ತು. ಆ ಸಮಯದಲ್ಲಿ ತೆಗೆದಿರುವ ಫೋಟೊ ಈಗ ವೈರಲ್ ಆಗಿದೆ.
ಈ ಹುಲಿ ಚರ್ಮ ಕಾನೂನು ಬದ್ಧವಾಗಿ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಅವರ ಬಳಿ ಇತ್ತು. ಅವರು ಆಶ್ರಮಕ್ಕೆ ಉಡುಗೊರೆ ನೀಡಿದ್ದರು. ಅದನ್ನು ಈ ಹಿಂದೆಯೇ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಫೋಟೊ ವೈರಲ್ ಆದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನನ್ನ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ. ಹುಲಿ ಚರ್ಮಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳಿಗೆ ನೀಡಿದ್ದೇನೆ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಇಲಾಖೆ ನಡೆಸುವ ಯಾವುದೇ ತನಿಖೆಗೂ ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.