ಕಾರು & ಬೈಕ್ ನಡುವಿನ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್!; ಪೊಲೀಸ್ ತನಿಖೆಯಲ್ಲಿ ವಾಸ್ತವ ಬಯಲು

ಚಿಕ್ಕಮಗಳೂರು:ಕಾರು-ಭೈಕ್ ನಡುವಿನ ಅಪಘಾತ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು,ಇದೊಂದು ಕೊಲೆ ಮಾಡುವ ಉದ್ದೇಶದಿಂದ ನಡೆದ ಅಪಘಾತ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಪ್ರಕರಣದ ಹಿಂದೆ ಬಿದ್ದ ಪೊಲೀಸರಿಗೆ ಈ ಅಪಘಾತದ ಹಿಂದಿನ‌ ಅಸಲಿಯತ್ತು ಬಯಲಾಗಿದೆ.

ಚಿಕ್ಕಮಗಳೂರು ಕಲ್ಯಾಣ ನಗರದ ಅಂಕಿತ್ ಮತ್ತು ನಕುಲ್ ಸ್ನೇಹಿತರಾಗಿದ್ದು, ಯುವತಿಯ ವಿಚಾರಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದು ಗಲಾಟೆ ಕೂಡ ಮೊದಲು ನಡೆದಿತ್ತು.

ಆ.14ರ ಮಧ್ಯರಾತ್ರಿ ನಕುಲ್‍ನನ್ನು ಮಾತನಾಡಬೇಕೆಂದು ಅಂಕಿತ್ ನರಿಗುಡ್ಡೆನಹಳ್ಳಿ ಸರ್ಕಲ್ ಗೆ ಕರೆದಿದ್ದ.ನಕುಲ್ ಬರುತ್ತಿದ್ದಂತೆ ಆತನ ಬೈಕ್‍ಗೆ ಕಾರು ಢಿಕ್ಕಿಯಾಗಿದೆ‌.

ಬೈಕ್ ಕಾರಿನ ಅಡಿಯಲ್ಲಿ ಸಿಲುಕಿದ್ದು,ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರಿಂದ ಬೈಕ್‍ಗೆ ಬೆಂಕಿ ಹತ್ತಿಕೊಂಡಿದೆ.ಬಳಿಕ ಕಾರು ತಿರುಗಿಸಿಕೊಂಡು ಅಂಕಿತ್ ಪರಾರಿಯಾಗಿದ್ದ.

ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು.ಬೈಕ್‍ನಲ್ಲಿದ್ದ ನಕುಲ್‍ಗೆ ಗಂಭೀರ ಗಾಯಗಳಾಗಿದ್ದು,ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕಾರು ಚಾಲನೆ ಮಾಡತ್ತಿದ್ದ ಅಂಕಿತ್‍ನನ್ನು ವಿಚಾರಣೆ ನಡೆಸಿದಾಗ
ಅಂಕಿತ್ ಸ್ನೇಹಿತ ನಕುಲ್ ಬೈಕ್‍ಗೆ ಕಾರು ಢಿಕ್ಕಿ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ನಡೆಸಿದ್ದಾನೆ ಎನ್ನುವುದು ಬಯಲಾಗಿದೆ.

ಟಾಪ್ ನ್ಯೂಸ್