ಬೆಂಗಳೂರು:ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂ.ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮತ್ತು ಇತರ ಆರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಬೆಂಗಳೂರು ನಗರದ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರವರನ್ನು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ನ್ಯಾಯಾಲಯ ಚೈತ್ರಾಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಚೈತ್ರಾ ಕುಂದಾಪುರ ಜೊತೆಗೆ ಗಗನ್ ಕಡೂರು, ಶ್ರೀಕಾಂತ್ ನಾಯಕ್, ಪ್ರಸಾದ್ ಎಂವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಗೋವಿಂದ ಪೂಜಾರಿಯನ್ನು ನಂಬಿಸಲು ಚೈತ್ರಾ ಅಂಡ್ ಗ್ಯಾಂಗ್ ಮಾಡಿದ್ದ ಪ್ಲಾನ್ ಮಾಡಿದ್ದರು. ಯಾರನ್ನೋ ಒಬ್ಬನನ್ನ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತೋರಿಸಿದ್ದರು. ಚಿಕ್ಕಮಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಗೆ ಆರ್ ಎಸ್ ಎಸ್ ಪ್ರಚಾರಕನ ಮೇಕಪ್ ಮಾಡಿಸಲಾಗಿತ್ತು.ಚಿಕ್ಕಮಗಳೂರು ಆರ್ ಎಸ್ಎಸ್ ಮುಖ್ಯಸ್ಥ ವಿಶ್ವನಾಥ್ ಜೀ ಹೆಸರಲ್ಲಿ ನಕಲಿ ವ್ಯಕ್ತಿ ರೆಡಿ ಮಾಡಲಾಗಿತ್ತು. ನಾಯ್ಕ್ ಹೆಸರಿನ ಬಿಜೆಪಿ ಪ್ರಚಾರ ಸಮಿತಿ ಸದಸ್ಯ ಎಂದು ಕಬಾಬ್ ಮಾರುವವನಿಗೆ ವೇಷ ಹಾಕಿಸಿದ್ದರು.ಆರ್ ಎಸ್ ಎಸ್ ಪ್ರಚಾರಕ ಅಂತಾ ಧನರಾಜ್ ಎಂಬುವವನನ್ನು ನೇಮಿಸಿದ್ದರು.ಅಷ್ಟೇ ಅಲ್ಲದೆ ಅಭಿನವ ಹಾಲಶ್ರೀ ಸ್ವಾಮೀಜಿ ಎಂಬುವವರಿಗೆ 1.5 ಕೋಟಿ ಹಣ ಕೊಡಿಸಿದ್ದರು.
ಗೋವಿಂದ ಪೂಜಾರಿ ದೂರಿನಲ್ಲಿ ಏನಿದೆ?
ನಾನು ಉಡುಪಿಯ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಳೆದ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಸಂದರ್ಭದಲ್ಲಿ ಕೆಲವು ಬೆಂಬಲಿಗರು ಚೈತ್ರಾ ಕುಂದಾಪುರ ಅವರನ್ನು ನನಗೆ ಪರಿಚಯಿಸಿದ್ದರು. ನನ್ನ ಮುಗ್ಧತೆಯನ್ನು ಬಳಸಿಕೊಂಡ ಚೈತ್ರಾ, ತಾನು ಹಿಂದೂಪರ ಸಂಘಟನೆಯಲ್ಲಿರುವುದರಿಂದ ಆರ್ಎಸ್ಎಸ್ಎಸ್ ವರಿಷ್ಠರಿಗೂ ಹತ್ತಿರ, ಪ್ರಧಾನಿ ಕಚೇರಿಯಲ್ಲಿಯೂ ಪ್ರಭಾವಿಯಾಗಿದ್ದೇನೆ. ಈ ಎಲ್ಲ ಪ್ರಭಾವಗಳನ್ನು ಬಳಸಿ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದರು. ನಂತರ ಕೇಂದ್ರದ ಆರ್ಎಸ್ಎಸ್ ಪ್ರಮುಖ ಎಂದು ವಿಶ್ವನಾಥ್ ಎಂಬಾತನನ್ನು ಪರಿಚಯಿಸಿದ್ದರು. ಅವರ ನಿರ್ದೇಶನದ ಮೇರೆಗೆ 3 ಹಂತಗಳಲ್ಲಿ ಸುಮಾರು 7 ಕೋಟಿ ರೂಪಾಯಿ ಹಣ ಪಡೆದಿದ್ದರು.
ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಹಣ ವಾಪಸ್ ನೀಡುವ ಭರವಸೆ ನೀಡಿದ್ದರು.ಆದರೆ ಮಾರ್ಚ್ ಆರಂಭದಲ್ಲಿ ಗೋವಿಂದ ಬಾಬು ಅವರಿಗೆ ಕರೆ ಮಾಡಿದ್ದ ಆರೋಪಿ ಗಗನ್ ಕಡೂರು, ವಿಶ್ವನಾಥ್ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಅನುಮಾನಗೊಂಡ ಗೋವಿಂದ್ ಬಾಬು ಕಾಶ್ಮೀರದಲ್ಲಿರುವ ತಮ್ಮ ಸ್ನೇಹಿತ, ನಿವೃತ್ತ ಸೇನಾಧಿಕಾರಿಯೊಬ್ಬರಿಗೆ ಕರೆ ಮಾಡಿ ವಿಚಾರಿಸಿದಾಗ ಆರ್ಎಸ್ಎಸ್ನಲ್ಲಿ ವಿಶ್ವನಾಥ್ ಹೆಸರಿನ ಯಾವ ಹಿರಿಯ ನಾಯಕರೂ ಇಲ್ಲ ಎಂಬುದು ಖಚಿತವಾಗಿತ್ತು. ಈ ಬಗ್ಗೆ ವಿಚಾರಿಸಿ ಹಣ ವಾಪಸ್ ಕೇಳಿದಾಗ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆಯ ನಾಟಕವಾಡಿದ್ದ ಚೈತ್ರಾ ಬಳಿಕ ಹಣ ವಾಪಸ್ ನೀಡಲು ಸಮಯಾವಕಾಶ ಕೇಳಿದ್ದರು.
ಈ ಬಗ್ಗೆ ಮತ್ತಷ್ಟು ವಿಚಾರಿಸಿದಾಗ ಕೆ.ಆರ್.ಪುರಂನಲ್ಲಿ ರಸ್ತೆ ಬದಿ ಕಬಾಬ್ ಮಾರುವವನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತೋರಿಸಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಗೆ ಆರ್ಎಸ್ಎಸ್ ಪ್ರಚಾರಕನಂತೆ ಮೇಕಪ್ ಮಾಡಿಸಿ ತಮಗೆ ಪರಿಚಯಿಸಿ ವಂಚಿಸಿರುವುದು ತಿಳಿದು ಬಂದಿತ್ತು. ತಕ್ಷಣ ಚೈತ್ರಾ ಕುಂದಾಪುರ, ಗಗನ್ ಕಡೂರು, ಅಭಿನವ ಹಾಲಶ್ರೀ ಸ್ವಾಮೀಜಿ, ರಮೇಶ್, ಧನರಾಜ್, ನಾಯ್ಕ್, ಶ್ರೀಕಾಂತ್, ಪ್ರಸಾದ್ ಬೈಂದೂರು ಎಂಬವರ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.