8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬರ್ಹಂಪುರ ನ್ಯಾಯಾಲಯ; ಏನಿದು ಪ್ರಕರಣ ಗೊತ್ತಾ?

8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬರ್ಹಂಪುರ ನ್ಯಾಯಾಲಯ; ಏನಿದು ಪ್ರಕರಣ ಗೊತ್ತಾ?

ಒಡಿಶಾದ ಗಂಜಾಮ್‌ ಜಿಲ್ಲೆಯ ಬರ್ಹಂಪುರ ಸ್ಥಳೀಯ ನ್ಯಾಯಾಲಯವು 2017ರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ 8 ಮಂದಿಯನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಲಯವು ಅಪರಾಧಿಗಳಿಗೆ ತಲಾ 15,000 ದಂಡ ವಿಧಿಸಿದೆ.

ಕೊಲೆಯಾದ ವ್ಯಕ್ತಿ ಎಂ.ಬುದು ಪಾತ್ರ ಹಾಗೂ ಶಿಕ್ಷೆಗೆ ಗುರಿಯಾಗಿರುವ ಎಂಟು ಮಂದಿ ಬರ್ಹಂಪುರದ ಅಂಬಗಡ ಗ್ರಾಮದವರು.ತಪ್ಪಿತಸ್ಥರು ದಂಡದ ರೂಪದಲ್ಲಿ ನ್ಯಾಯಾಲಯಕ್ಕೆ ಪಾವತಿಸುವ ಹಣವನ್ನು ಮೃತ ವ್ಯಕ್ತಿಯ ಪತ್ನಿಗೆ ಪರಿಹಾರವಾಗಿ ತಲುಪಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳಿಗೆ ಕೋರ್ಟ್‌ ಸೂಚಿಸಿದೆ. ಒಂದು ವೇಳೆ ತಪ್ಪಿತಸ್ಥರು ದಂಡ ಪಾವತಿಸಲು ವಿಫಲವಾದರೆ, ಇನ್ನಷ್ಟು ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದೂ ಎಚ್ಚರಿಸಿದೆ.

ಬುದು ಹಾಗೂ ತಪ್ಪಿತಸ್ಥರಲ್ಲಿ ಒಬ್ಬನ ನಡುವೆ ದ್ವೇಷದ ಕಾರಣಕ್ಕೆ 2017ರ ಸೆಪ್ಟೆಂಬರ್‌ 17ರಂದು ಜಗಳವಾಗಿತ್ತು. ಈ ಸಂಬಂಧ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಂಧಾನ ಮಾತುಕತೆ ವೇಳೆ ಅಪರಾಧಿಗಳು ಕಟ್ಟಿಗೆ, ಕಬ್ಬಿಣದ ರಾಡ್‌ ಸೇರಿದಂತೆ ಇನ್ನಿತರ ಮಾರಕಾಸ್ತ್ರಗಳಿಂದ ಬುದು ಮೇಲೆ ಹಲ್ಲೆ ನಡೆಸಿದ್ದರು.

ಅಲ್ಲಿಂದ ತಪ್ಪಿಸಿಕೊಂಡ ಬುದು ಭವನದ ಪಕ್ಕದಲ್ಲೇ ಇದ್ದ ತಮ್ಮ ಸಹೋದರನ ಮನೆಗೆ ಓಡಿದ್ದರು. ಅಲ್ಲಿಗೂ ಹಿಂಬಾಲಿಸಿ ಬಂದ ಕಿಡಿಗೇಡಿಗಳು,ಗಂಭೀರವಾಗಿ ಹಲ್ಲೆ ಮಾಡಿದ್ದರು.ತೀವ್ರವಾಗಿ ಗಾಯಗೊಂಡಿದ್ದ ಬುದು ಬರ್ಹಂಪುರದ ಆಸ್ಪತ್ರೆಯಲ್ಲಿ ಕೆಲ ಹೊತ್ತಿನಲ್ಲೇ ಮೃತಪಟ್ಟಿದ್ದರು.

ಈ ಸಂಬಂಧ ಬುದು ಸಹೋದರ ನೀಡಿದ ದೂರಿನನ್ವಯ ಪೊಲೀಸರು ಎಂಟು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಟಾಪ್ ನ್ಯೂಸ್