ಕಪ್ಪು ಹಣ ತರುವಲ್ಲಿ ಮೋದಿ ಸರಕಾರ ವಿಫಲವಾಗಿದೆ; ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ವಾಗ್ಧಾಳಿ

ಬೆಂಗಳೂರು; ವಿದೇಶದಿಂದ ಕಪ್ಪು ಹಣವನ್ನು ದೇಶಕ್ಕೆ ತರುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಭಾರತೀಯರು ಇರಿಸಿರುವ ಮೂರು ಲಕ್ಷ ಕೋಟಿಯಷ್ಟು ಕಪ್ಪು ಹಣ ವಿದೇಶಿ ಬ್ಯಾಂಕ್‌ಗಳಲ್ಲಿ ಇದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ದೂರಿದ್ದಾರೆ.

ವಿರಾಟ್‌ ಹಿಂದೂಸ್ತಾನ್‌ ಸಂಘಟನೆ ಆಯೋಜಿಸಿದ್ದ ಅಯ್ಯರ್‌ ಮತ್ತು ಜಗದೀಶ್‌ ಶೆಟ್ಟಿ ಬರೆದಿರುವ ‘ಪೇಪರ್‌ ಇನ್‌ ಮನಿ ಔಟ್‌’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು,
ಕಪ್ಪು ಹಣವನ್ನು ದೇಶಕ್ಕೆ ತರಲು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ನಾನು ಪ್ರಧಾನಿಯವರಿಗೆ ಮನವಿ ಮಾಡಿದ್ದೆ. ಆದರೆ ಅವರು ಉತ್ಸಾಹ ತೋರಲಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಣಕಾಸು ಸಚಿವಾಲಯದ ಮೇಲೆ ಹಿಡಿತವಿಲ್ಲ. ಅವರ ಸಚಿವಾಲಯವು ಪ್ರಧಾನಿ ಕಚೇರಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಆದಾಯ ತೆರಿಗೆ ಪದ್ಧತಿಯಿಂದ ದೇಶದ ಮಧ್ಯಮ ವರ್ಗ ಮತ್ತು ಸಂಬಳ ಆಧರಿಸಿ ಜೀವನ ನಡೆಸುವ ಕುಟುಂಬಗಳಿಗೆ ಹೊರೆಯಾಗುತ್ತಿದೆ. ಆದಾಯ ತೆರಿಗೆ ಪದ್ಧತಿಯನ್ನು ರದ್ದುಪಡಿಸಿ, ಮಾರುಕಟ್ಟೆ ಆಧಾರಿತ ಆರ್ಥಿಕತೆಯನ್ನು ಬಲಪಡಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ದುಡಿಯುವ ಜನರಿಗೆ ಕೆಲಸ ಕೊಡಬೇಕು ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್