ಚಿತ್ರ;ಟಿಕೆಟ್ ಆಕಾಂಕ್ಷಿ ಗಾಯತ್ರಿ
ಕೊಪ್ಪಳ; ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬೈಂದೂರಿನ ಟಿಕೆಟ್ ಕೊಡಿಸುವುದಾಗಿ 7 ಕೋಟಿ ವಂಚನೆ ಮಾಡಿದ ಚೈತ್ರಾ ಕುಂದಾಪುರ ಗ್ಯಾಂಗ್ ಮಾದರಿಯಲ್ಲೇ ಟಿಕೆಟ್ಗಾಗಿ ನಡೆದ ಮತ್ತೊಂದು ಡೀಲ್ ಬಹಿರಂಗವಾಗಿದೆ.
ಕೊಪ್ಪಳದ ಕನಕಗಿರಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪದಡಿ ಮೂವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ತಿಮ್ಮಾರೆಡ್ಡಿ ಎಂಬುವರು ಜುಲೈ 19ರಂದು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ತಿಮ್ಮಾರೆಡ್ಡಿ ಪತ್ನಿ ಗಾಯತ್ರಿಗೆ ಟಿಕೆಟ್ ಕೊಡಿಸುವುದಾಗಿ 21ಲಕ್ಷ ರೂ.ನಗದು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ತಿಮ್ಮಾರೆಡ್ಡಿಗೆ, ಬೆಂಗಳೂರಿನ ಜೀತು ಎಂಬಾತನ ಮೂಲಕ ದೆಹಲಿ ಮೂಲದ ವಿಶಾಲನಾಗ್ ಎಂಬವ ಪರಿಚಯವಾಗಿದ್ದ. ವಿಶಾಲನಾಗ್ ತನ್ನನ್ನು ಬಿಜೆಪಿಯ ಕೇಂದ್ರ ಚುನಾವಣಾ ಸರ್ವೆ ತಂಡದ ಮುಖಸ್ಥ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ಬಿಜೆಪಿ ಟಿಕೆಟ್ ನೀಡಲು ಅಮಿತ್ ಶಾ ಮತ್ತು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಮಗೆ ಸರ್ವೆ ಮಾಡಲು ಹೇಳಿದ್ದಾರೆ.ಸರ್ವೆಯಲ್ಲಿ ನಿಮ್ಮ ಪತ್ನಿಯ ಹೆಸರು ಎರಡನೇ ಸ್ಥಾನದಲ್ಲಿದೆ.ಮೊದಲ ಸ್ಥಾನಕ್ಕೆ ತಂದು ಟಿಕೆಟ್ ಕೊಡಿಸುತ್ತೇನೆ.ಇದಕ್ಕಾಗಿ ನಮ್ಮ ಸರ್ವೆ ತಂಡಕ್ಕೆ ಹಣ ನೀಡಬೇಕು ಎಂದಿದ್ದ. ಇದರಂತೆ ಈತನ ಮತು ನಂಬಿ 21 ಲಕ್ಷ ಹಣವನ್ನು ತಿಮ್ಮಾರೆಡ್ಡಿ ನೀಡಿದ್ದರು. ಆದರೆ ಟಿಕೆಟ್ ಮಾತ್ರ ಸಿಕ್ಕಿರಲಿಲ್ಲ.
ಈ ಸಂಬಂಧ ವಿಶಾಲನಾಗ್, ಗೌರವ್ ಮತ್ತು ಜೀತು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.