ಹುಬ್ಬಳ್ಳಿ;ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ನಿನ್ನೆಯಷ್ಟೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ್ದರು.
ನಿನ್ನೆ ಕಾಂಗ್ರೆಸ್ ಸೇರ್ಪಡೆ ವೇಳೆ ಬಿಜೆಪಿ ನನ್ನನ್ನು ಹೊರಹಾಕಿದೆ, ಅವಮಾನ ಮಾಡಿದೆ, ಹಿಂಸೆ ನೀಡಿದೆ ಎಂದು ಹೇಳಿದ್ದರು.ಜೊತೆಗೆ ರಾಜ್ಯದಲ್ಲಿನ ಕೆಲವರು ನನ್ನ ಬಗ್ಗೆ ಪಿತೂರಿ ನಡೆಸಿದ್ದಾರೆ.ಹೈಕಮಾಂಡ್ ಗೆ ಅಭಿಪ್ರಾಯ ಚೆನ್ನಾಗಿತ್ತು ಎಂದು ಹೇಳಿದ್ದರು.ಸೂಕ್ತ ಸಮಯದಲ್ಲಿ ವ್ಯಕ್ತಿಯ ಹೆಸರು ಬಹಿರಂಗ ಮಾಡುವುದಾಗಿ ಹೇಳಿದ್ದರು.
ಇದೀಗ ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯಾದರ್ಶಿ ಬಿ.ಎಲ್.ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ದಿಡೀರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್,ಬಿಜೆಪಿಯ ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರು ಇತ್ತು ಅನ್ನೋದು ಗೊತ್ತಿದೆ. ಆದರೆ ಹೈಕಮಾಂಡ್ ಲೇವಲ್ ನಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ.ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪಲು ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ ಎಂದು ಹೇಳಿದ್ದಾರೆ.
ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿದ್ದಾರೆ.ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ಮಾಡಿದರು.ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು.ಇದರಿಂದ ನನಗೆ ಟಿಕೆಟ್ ತಪ್ಪಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಮಾಜಿ ಸಿಎಂ ಶೆಟ್ಟರ್ ಈಗಾಗಲೇ 30 ವರ್ಷಗಳ ಬಿಜೆಪಿ ಜೊತೆಗಿನ ಕೊಂಡಿ ಕಳಚಿ ಕಾಂಗ್ರೆಸ್ ನಿಂದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಗೆಲುವಿನ ಮೂಲಕ ಬಿಜೆಪಿಗೆ ಉತ್ತರ ಕೊಡಲು ಮುಂದಾಗಿದ್ದಾರೆ.