ಯಾರಾಗಲಿದ್ದಾರೆ ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕ? ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಕಂಡ ಕಾರಣ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚನೆಯಾಗಿದೆ.ಆದರೆ ಚುನಾವಣೆ ಫಲಿತಾಂಶ ಬಂದು ತಿಂಗಳು ಸಮೀಪಿಸುತ್ತಾ ಬಂದರೂ ಬಿಜೆಪಿ ಇನ್ನೂ ಪ್ರತಿಪಕ್ಷದ ನಾಯಕನನ್ನು ಅಂತಿಮಗೊಳಿಸಿಲ್ಲ.

ಈ ವಿಚಾರವಾಗಿ ದೆಹಲಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮುಂದಿನ ಮೂರು ದಿನಗಳಲ್ಲಿ ಪಕ್ಷವು ಕರ್ನಾಟಕದ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ಮಧ್ಯೆ ಅರವಿಂದ್ ಬೆಲ್ಲದ್ ಅವರ ಹೆಸರು ಕೂಡ ಕೇಳಿ‌ ಬಂದಿದೆ.ಆದರೆ ಕೊನೆಗೆ ಇವರಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ಯಾರಿಗೆ ಸಿಗಲಿದೆ ಎನ್ನುವುದು ಕಾದು ನೋಡಬೇಕಿದೆ‌.

ಜುಲೈ 7 ರಂದು ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಬಿಜೆಪಿ ಪ್ರತಿಪಕ್ಷದ ನಾಯಕನಿಗೆ ನೇಮಿಸಬೇಕಿದೆ.

ಇನ್ನು ಪ್ರತಿಪಕ್ಷದ ಸ್ಥಾನದ ಜೊತೆಗೆ ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆ ಕೂಡ ನಡೆಯಲಿದೆ ಎನ್ನಲಾಗಿದೆ.ಅವರ ಅವಧಿ ಕಳೆದ ಆಗಸ್ಟ್ ತಿಂಗಳಿಗೆ ಮುಗಿದಿದ್ದು, ಚುನಾವಣೆ ಹಿನ್ನೆಲೆ ಅಧಿಕಾರಾವಧಿ ಮುಂದುವರಿಸಲಾಗಿತ್ತು ಎನ್ನಲಾಗಿದೆ.

ಟಾಪ್ ನ್ಯೂಸ್