BIG NEWS ಬಹುಮಡಿ ಕಟ್ಟಡ ಕುಸಿತ, ನಾಲ್ಕು ಕುಟುಂಬ ಸೇರಿ ಹಲವರು ಕಟ್ಟಡದಡಿ ಸಿಲುಕಿರುವ ಶಂಕೆ
ಮಹಾರಾಷ್ಟ್ರದ ಭಿವಂಡಿಯಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎರಡು ಅಂತಸ್ತಿನ ಕಟ್ಟಡ ಕುಸಿದಿದ್ದು, ಕನಿಷ್ಠ 10 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಭಿವಂಡಿ ಅಗ್ನಿಶಾಮಕ ದಳ ಮತ್ತು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ (ಆರ್‌ಡಿಎಂಸಿ) ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
“ನಮ್ಮ ಒಂದು ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣೆಯನ್ನು ಪ್ರಾರಂಭಿಸಿದೆ ಮತ್ತು ಭಿವಂಡಿ ಅಗ್ನಿಶಾಮಕ ತಂಡವೂ ಸ್ಥಳದಲ್ಲಿದೆ. ನಾನು ಇನ್ನೊಂದು ತಂಡದೊಂದಿಗೆ ತೆರಳುವ ದಾರಿಯಲ್ಲಿದ್ದೇನೆ. ಕೆಲವು ಕಾರ್ಮಿಕರು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಆರ್‌ಡಿಎಂಸಿ-ಟಿಎಂಸಿ ಮುಖ್ಯಸ್ಥ ಅವಿನಾಶ್ ಸಾವಂತ್ ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ, ಭಿವಂಡಿಯಲ್ಲಿ ವಿವಿಧ ಕಟ್ಟಡ ಕುಸಿತದ ಘಟನೆಗಳಲ್ಲಿ 58 ಜನರು ಸಾವನ್ನಪ್ಪಿದ್ದಾರೆ. ಕಟ್ಟಡ ಕುಸಿತದ ಅತ್ಯಂತ ಕೆಟ್ಟ ಘಟನೆಯಲ್ಲಿ, ಭಿವಾಂಡಿಯ ಪಟೇಲ್ ಕಾಂಪೌಂಡ್‌ನಲ್ಲಿ ಸೆಪ್ಟೆಂಬರ್ 2020 ರಲ್ಲಿ 38 ಜನರು ಸಾವನ್ನಪ್ಪಿದರು ಮತ್ತು 25 ಇತರರು ಗಾಯಗೊಂಡಿದ್ದರು.
ಸ್ಥಳೀಯರ ಪ್ರಕಾರ, 15 ರಿಂದ 20 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.ಕುಸಿದಿದ್ದು 2 ಅಂತಸ್ತಿನ ಕಟ್ಟಡ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ಎನ್ಡಿಆರ್‌ಎಫ್ ಮತ್ತು ಪೊಲೀಸರ ವಿಪತ್ತು ತಂಡಗಳು ಸ್ಥಳಕ್ಕೆ ತಲುಪಿವೆ. ಸ್ಥಳೀಯರ ಪ್ರಕಾರ, ನಾಲ್ಕು ಕುಟುಂಬಗಳು
ಮತ್ತು ಕೆಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.