ಬ್ರಹ್ಮಾವರ:ದೋಣಿ ಮಗುಚಿ ಮೂವರು ಯುವಕರು ಮೃತಪಟ್ಟಿದ್ದು, ಓರ್ವ ಯುವಕ ನೀರು ಪಾಲಾಗಿ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ.
ಹೂಡೆಯ ಫೈಝಾನ್ ಸೇರಿ ಸಂಬಂಧಿಗಳಾದ ಒಟ್ಟು 7 ಮಂದಿ ಯುವಕರು ದೋಣಿಯಲ್ಲಿ ತೆರಳುವಾಗ ಅವಘಡ ನಡೆದಿದೆ.
ರಂಝಾನ್ ಹಿನ್ನೆಲೆಯಲ್ಲಿ ತೀರ್ಥಳ್ಳಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು.ಅಲ್ಲಿಂದ ಒಟ್ಟು ಏಳು ಮಂದಿ ವಾಯು ವಿಹಾರಕ್ಕೆಂದು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ನಡೆದಿದೆ.
ದೋಣಿ ಮಗುಚಿದಾಗ 7 ಮಂದಿಯಲ್ಲಿ ಮೂವರು ಈಜಿ ಕೊಂಡು ದಡ ಸೇರಿಕೊಂಡರು. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈಗಾಗಲೆ ಮೂವರ ಮೃತದೇಹ ಮೇಲಕ್ಕೆ ಎತ್ತಲಾಗಿದೆ.ಇನ್ನೋರ್ವನಿಗೆ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.