4 ತಿಂಗಳ ಮಗುವನ್ನು ರಸ್ತೆಗೆ ಎಸೆದು ಕೊಂದ ತಂದೆ

ಚಿಕ್ಕೋಡಿ:ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ತಂದೆ ಸಿಟ್ಟಿನಿಂದ ಡಾಂಬರ್ ರಸ್ತೆ ಮೇಲೆ ಎಸೆದು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.

ಸೆಪ್ಟೆಂಬರ್​​ 18ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪ ಬಳುನಕಿ ಎಂಬಾತ 4 ತಿಂಗಳ ಮಗು ಸಂಚಿತ್‌ ಗೆ ಹತ್ಯೆ ಮಾಡಿದ್ದಾನೆ.

ಕೆಎಸ್‌ಐಎಸ್‌ಎಫ್ ಪೇದೆಯಾಗಿದ್ದ ಬಸಪ್ಪ ಬಳುಣಕಿ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷದ ಹಿಂದೆ ಚಿಂಚಲಿಯ ಲಕ್ಷ್ಮೀ ಜೊತೆ ಬಸಪ್ಪ ವಿವಾಹವಾಗಿದ್ದ.ಲಕ್ಷ್ಮೀ-ಬಸಪ್ಪ ದಂಪತಿಗೆ 4 ತಿಂಗಳ ಹಿಂದೆ ಗಂಡು ಮಗುವಾಗಿತ್ತು. ಮಗುವಾದ ಬಳಿಕ ಲಕ್ಷ್ಮೀ ತಾಯಿಯ ಮನೆಯಲ್ಲಿ ವಾಸವಿದ್ದಳು.

ಸೆಪ್ಟೆಂಬರ್ 18ರಂದು ಚಿಂಚಲಿ ಗ್ರಾಮಕ್ಕೆ ಆಗಮಿಸಿದ್ದ ಬಸಪ್ಪ ಊರಲ್ಲಿ ಜಾತ್ರೆಯಿದೆ, ಮಗುವನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಬೈಕ್ ಮೇಲೆ ನಾಲ್ಕು ತಿಂಗಳ ಮಗುವನ್ನು ಕರೆದುಕೊಂಡು ಹೋಗಲು ತಂದೆ ಬಸಪ್ಪ ಮುಂದಾಗಿದ್ದಾನೆ.ಈ ವೇಳೆ ಬೇಡ ಚಿಕ್ಕ ಮಗುವನ್ನು ಕರೆದುಕೊಂಡು ಹೋಗಲು ಸಾಧ್ಯವಾಗದು ಎಂದು ಮನೆಯವರು ತಡೆದಿದ್ದಾರೆ.ಅದಕ್ಕೆ ಕೋಪಗೊಂಡು ಮಗುವನ್ನು ನೆಲಕ್ಕೆ ಎಸೆದಿದ್ದಾನೆ. ಮಗು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ.

ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಬೈಕ್, ಬಂಗಾರ, ಹಣ ನೀಡಿಲ್ಲ ಎಂದು ಕಿರುಕುಳ ನೀಡುತ್ತಿದ್ದ ಎಂದು ಬಸಪ್ಪನ ವಿರುದ್ಧ ಪತ್ನಿ ಆರೋಪಿಸಿದ್ದಾರೆ. ಆರೋಪಿ ಬಸಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟಾಪ್ ನ್ಯೂಸ್