ಊರಿಗೆ ಹೋಗಲು ಬಸ್ ಇಲ್ಲ ಎಂದು ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದ KSRTC ಬಸ್ ನ್ನು ಚಲಾಯಿಸಿಕೊಂಡು ಹೋದ ಆಸಾಮಿ; ಮುಂದೇನಾಯ್ತು ಗೊತ್ತಾ?
ಬೀದರ್;ಊರಿಗೆ ಹೋಗಲು ಬಸ್ ಇಲ್ಲ ಎಂದು ವ್ಯಕ್ತಿಯೋರ್ವ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ ನ್ನು ತೆಗೆದುಕೊಂಡು ಹೋಗಿ ಡಿವೈಡರ್ ಮೇಲೆ ಹತ್ತಿಸಿದ ಘಟನೆ ಬೀದರ್ ನ ಔರಾದ್ ನಲ್ಲಿ ನಡೆದಿದೆ.
ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಬೆಳಿಗ್ಗೆಯಿಂದ ಬಸ್ ನಿಲ್ದಾಣದಲ್ಲಿ ಕುಳಿತರೂ ಆತನಿಗೆ ತನ್ನ ಊರಿಗೆ ಹೋಗಲು ಬಸ್ ಸಿಕ್ಕಿಲ್ಲ.
ಇದರಿಂದ ಸುಸ್ತಾದ ಯಶಪ್ಪ ನಿಲ್ದಾಣದಲ್ಲಿ ಬಸ್ ತಂದು ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ನಿಲ್ದಾಣದಲ್ಲಿ ಎಂಟ್ರಿ ಮಾಡಿಸಿಕೊಂಡು ಬರಲು ಹೋದಾಗ ಈತ ಬಸ್ ನ್ನು ತನ್ನೂರಿಗೆ ಚಲಾಯಿಸಿ ಕೊಂಡು ಹೋಗಲು ಮುಂದಾಗಿದ್ದಾನೆ.ಈ ವೇಳೆ ಬಸ್, ಬಸ್ ನಿಲ್ದಾಣದ ಪಕ್ಕದ ಡಿವೈಡರ್ ಮೇಲೇರಿದೆ. ಬಸ್ ನಲ್ಲಿದ್ದ ಇತರ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಬಳಿಕ ಕುಡುಕ ಯಶಪ್ಪ ಸೂರ್ಯವಂಶಿ ಓಡಿ ಹೋಗಲು ಯತ್ನಿಸಿದ್ದಾನೆ.ಈ ವೇಳೆ ಸಾರ್ವಜನಿಕರ ಸಹಾಯದಿಂದ ಎಎಸ್‌ಐ ಸುನೀಲ್ ಆತನನ್ನು ಹಿಡಿದು ಔರಾದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಯಶಪ್ಪ ಸೂರ್ಯವಂಶಿ ಇಟಂಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು,ಕಂಠಪೂರ್ತಿ ಕುಡಿದು ಕೃತ್ಯ ನಡೆಸಿದ್ದಾನೆ.ಅಪಘಾತದ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು.ಸ್ಥಳಕ್ಕೆ ಪಿಎಸ್‌ಐ ಮಡಿವಾಳಪ್ಪ ಭೇಟಿ ನೀಡಿ ಸಂಚಾರ ದಟ್ಟಣೆ ನಿವಾರಿಸಿದ್ದಾರೆ.