ಬಿಬಿಎಂಪಿಯ 14 ಲಕ್ಷ ಹಣವನ್ನು ಪ್ರೇಯಸಿಯ ಖಾತೆಗೆ ವರ್ಗಾವಣೆ ಮಾಡಿದ ದ್ವಿತೀಯ ದರ್ಜೆ ಸಹಾಯಕ!
ಬೆಂಗಳೂರು;ಬಿಬಿಎಂಪಿಯ 14ಲಕ್ಷ ಹಣವನ್ನು ದ್ವಿತೀಯ ದರ್ಜೆ ಸಹಾಯಕ ತನ್ನ ಪ್ರೇಯಸಿ ಬ್ಯಾಂಕ್ ಖಾತೆಗೆ ಜಮೆ ಮಾಡಿರುವುದು ಬಹಿರಂಗವಾಗಿದೆ.
ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ ಎಂ.ಕೆ.ಪ್ರಕಾಶ್ (39) ಮತ್ತು ಯಲಹಂಕ ಉಪನಗರದ ಬ್ಯೂಟಿಷಿಯನ್ ಕಾಂಚನಾ(30) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಕಚೇರಿಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್,2021-22ನೇ ಸಾಲಿನಲ್ಲಿ 14.07ಲಕ್ಷ ಪ್ರೇಯಸಿಯ ಖಾತೆಗೆ ಜಮೆ ಮಾಡಿದ್ದಾನೆ.
ಈ ಕುರಿತು ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ನಾಯ್ಕ್ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕಾಶ್,ವಾರ್ಡ್‌ನಲ್ಲಿ ನಡೆಯುತ್ತಿದ್ದ ಕಾಮಗಾರಿಗಳ ಸಂಬಂಧ ಮೇಲಧಿಕಾರಿ ಸಹಿ ಹಾಗೂ ಒಪ್ಪಿಗೆ ಪಡೆದು ಗುತ್ತಿಗೆದಾರರಿಗೆ ನೀಡಬೇಕಿದ್ದನ್ನು ಕಾಂಚನಾ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದ.
ಲೆಕ್ಕ ಪರಿಶೋಧನೆ ವೇಳೆ ಕೆಲ ಲೆಕ್ಕಪತ್ರಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ತೆಗೆದು ನೋಡಿದಾಗ ಅಪರಿಚಿತ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.ಈ ಬಗ್ಗೆ ತನಿಖೆ ನಡೆಸಿದಾಗ ಅಸಲಿಯತ್ತು ಬಹಿರಂಗವಾಗಿದೆ.