ಉತ್ತರಪ್ರದೇಶ; ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಮನನೊಂದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.
30ರ ಹರೆಯದ ದಂಪತಿ ಗುರುವಾರ ಮುಂಜಾನೆ ವಿಷ ಸೇವಿಸಿದ್ದಾರೆ.ಪತಿ ಅದೇ ದಿನ ಮೃತಪಟ್ಟಿದ್ದರೆ, ಪತ್ನಿ ಗೋರಖ್ ಪುರ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಬಸ್ತಿ ಎಸ್ಪಿ ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 21ರಂದು ರಾತ್ರಿ ಪತ್ನಿಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ದಂಪತಿ ವಿಡಿಯೊ ಚಿತ್ರೀಕರಿಸಿದ್ದು, ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಡಿ ಮತ್ತು 306ರ ಅನ್ವಯ ಸಾಮೂಹಿಕ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಾದ ಆದರ್ಶ (25) ಮತ್ತು ತ್ರಿಲೋಕಿ (47) ಎಂಬುವವರನ್ನು ಬಂಧಿಸಲಾಗಿದೆ.